NationalPolitics

ಒಂದೇ ಹಂತದಲ್ಲಿ ರಾಜ್ಯ ಚುನಾವಣೆ; ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್‌

ನವದೆಹಲಿ; ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಲಾಗಿದೆ. ಮೇ 10ಕ್ಕೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ.

 

ನೀತಿಸಂಹಿತೆ; ಇಂದಿನಿಂದಲೇ ಜಾರಿ

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ; ಏಪ್ರಿಲ್‌ 20

ನಾಮಪತ್ರ ಪರಿಶೀಲನೆ;‌‌ ಏಪ್ರಿಲ್‌ 21

ನಾಮಪತ್ರ ವಾಪಸ್‌;‌‌ ಏಪ್ರಿಲ್‌ 24

ಮತದಾನದ ದಿನಾಂಕ;‌‌ ಮೇ 10

ಮತ ಎಣಿಕೆ;‌ ಮೇ 13

ಮೇ 24ರವರೆಗೆ ಈ ವಿಧಾನಸಭಾ ಅವಧಿ ಇದೆ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಹಿಂದೆ ನಡೆದ ಚುನಾವಣೆಗಳಲ್ಲಿ ಸಾಕಷ್ಟು ಯಾವುದೇ ಅಹಿತಕರ ಹಾಗೂ ಅಕ್ರಮಗಳ ನಡೆಯದಂತೆ ನೋಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಬೇರೆಯದೇ ಆದ ಚಾಲೆಂಜ್‌ ಇದೆ.

224 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಬಾರಿಗೆ ಎಂಬತ್ತು ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕರು ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಚುನಾವಣೆ ಸಿಬ್ಬಂದಿ ಮನೆಗೇ ಹೋಗಿ ಮತ ಚಲಾವಣೆ ಮಾಡಿಸಲಿದ್ದಾರೆ. ಮನೆಯಿಂದಲೇ ಮತದಾನ ಮಾಡಿದರೂ ಗೌಪ್ಯತೆಯನ್ನು ಕಾಪಾಡಲಾಗುತ್ತದೆ.

ಏಪ್ರಿಲ್‌ ೧ಕ್ಕೆ ೧೮ ವರ್ಷ ತುಂಬಿದವರು ಮತದಾನ ಮಾಡಲು ಅರ್ಹರಿರುತ್ತಾರೆ. ಬುಡಕಟ್ಟು ಸಮುದಾಯದವರಿಗೆ ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ.ನೂರು ಬೂತ್‌ಗಳಲ್ಲಿ ವಿಕಲಚೇತನ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಬೆಂಗಳೂರು ನಗರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ನಗರ ಮತದಾರರಿಗೆ ಮತದಾನ ಮಹತ್ವವನ್ನು ತಿಳಿಸಿಕೊಡಲಾಗುವುದು. ಬೆಂಗಳೂರು ನಗರದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಕ್ರಮ ವಹಿಸಲಾಗುವುದು. ಜನರನ್ನು ಮತಗಟ್ಟೆಯತ್ತ ಸೆಳೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣಾ ಅಕ್ರಮಗಳನ್ನು ತಡೆಯಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಆಯೋಗದ ವೆಬ್‌ ಸೈಟ್‌ನಲ್ಲಿ ಈ ಬಗ್ಗೆ ದೂರು ಸಲ್ಲಿಸಬಹುದು.

ಚುನಾವಣಾ ಅಕ್ರಮ ತಡೆಯಲು 2400 ತಂಡಗಳ ರಚನೆ ಮಾಡಲಾಗಿದೆ. ೧೭೧ ಅಂತಾರಾಜ್ಯ ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಎಲ್ಲಾ ವಿಮಾನ, ಹೆಲಿಕಾಪ್ಟರ್‌ಗಳನ್ನು ಕೂಡಾ ತಪಾಸಣೆ ಮಾಡಲಾಗುತ್ತದೆ. ಗೋಡೌನ್‌ಗಳು, ವೇರ್‌ಹೌಸ್‌ಗಳ ಮೇಲೆ ನಿಗಾ ಇಡಲಾಗುತ್ತದೆ. ಜಲ, ರಸ್ತೆ, ವಾಯು ಮೂರೂ ಮಾರ್ಗಗಳ ಮೇಲೆ ನಿಗಾ ಇಡಲಾಗುತ್ತದೆ.

ರಾಜ್ಯದಲ್ಲಿ ಮತಗಟ್ಟೆಗಳ ವಿವರ:

– ಒಟ್ಟು 58,282 ಮತಗಟ್ಟೆಗಳು

– ಒಂದು ಮತಗಟ್ಟೆಯಲ್ಲಿ 883 ಜನ ಮತ ಹಾಕಬಹುದು

– ನಗರ ಪ್ರದೇಶಗಳಲ್ಲಿ 24,063 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 34,219 ಮತಗಟ್ಟೆಗಳು

– ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳು ಇರುವಂತೆ ನೋಡಿಕೊಳ್ಳಲಾಗುವುದು

-ಅಂಗವಿಕಲರಿಗೆ ವ್ಹೀಲ್​ಚೇರ್ ವ್ಯವಸ್ಥೆ ಇರಲಿದೆ

ರಾಜ್ಯದಲ್ಲಿ ಎಷ್ಟು ಮಂದಿ ಮತದಾರರು?

  • ರಾಜ್ಯದಲ್ಲಿ ಒಟ್ಟು 5,21,73,579 ಜನ ಮತದಾರರಿದ್ದಾರೆ
  • 2,62,42,561 ಜನ ಪುರುಷ ಮತದಾರರಿದ್ದಾರೆ
  • 2,59,26,319 ಮಹಿಳಾ ಮತದಾರರಿದ್ದಾರೆ
  • 80 ವರ್ಷ ಮೇಲ್ಪಟ್ಟವರು 12,15,763 ಜನ ಇದ್ದಾರೆ
  • 100 ವರ್ಷ ಮೇಲ್ಪಟ್ಟ 16,976 ಮತದಾರರಿದ್ದಾರೆ
  • 9,17,241 ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ
  • 4,699 ತೃತೀಯ ಲಿಂಗಿ ಮತದಾರರಿದ್ದಾರೆ
Share Post