National

ಮರಗಳಿಗೂ ನೀಡ್ತಾರಂತೆ ಚಿಕಿತ್ಸೆ; ದೆಹಲಿಯಲ್ಲಿ ರೆಡಿಯಾಯ್ತು ಟ್ರೀ ಆಂಬುಲೆನ್ಸ್‌..!

ನವದೆಹಲಿ: ಮನುಷ್ಯನಿಗೆ ಹಾಗೂ ಪ್ರಾಣಿಗಳಿಗೆ ಆರೋಗ್ಯ ಸೇವೆಗಳಿವೆ. ಅತ್ಯಾಧುನಿಕ ಚಿಕಿತ್ಸಾ ವಿಧಾನಗಳೂ ಬಂದಿವೆ. ಮನುಷ್ಯರಿಗೆ ಹಾಗೂ ಪ್ರಾಣಿಗಳು ಪ್ರತ್ಯೇಕ ವೈದ್ಯರು, ಆಸ್ಪತ್ರೆಗಳು ಇವೆ. ಆದ್ರೆ, ಮರಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸೌಲಭ್ಯಗಳು ಎಲ್ಲೂ ಇಲ್ಲ. ಆದ್ರೆ ದೆಹಲಿಯಲ್ಲಿ ಮರಗಳನ್ನು ಕಾಪಾಡುವುದಕ್ಕಾಗಿ ಟ್ರೀ ಆಂಬುಲೆನ್ಸ್‌ ರಸ್ತೆಗಿಳಿದಿದೆ.

    ಹೌದು, ದೆಹಲಿ  ಪೂರ್ವ ಮಹಾನಗರ ಪಾಲಿಕೆ ಮರಗಳಿಗೂ ಚಿಕಿತ್ಸೆ ನೀಡಲು ಉಚಿತ ಆ್ಯಂಬುಲೆನ್ಸ್​ ಸೇವೆಯನ್ನು ಆರಂಭಿಸಿದೆ. ಒಣಗುತ್ತಿರುವ ಮರಗಳಿಗೆ ಚಿಕಿತ್ಸೆ ನೀಡುವುದು ಇದರ ಉದ್ದೇಶ. ದೆಹಲಿಯಲ್ಲಿ ಶುದ್ಧ ಗಾಳಿಯಿಲ್ಲದೆ ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಸ್ಥಳೀಯ ಆಡಳಿತ ಮರಗಳನ್ನು ಬೆಳೆಸುವುದು ಹಾಗೂ ಇರುವ ಮರಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಟ್ರೀ ಆಂಬುಲೆನ್ಸ್‌ ಪರಿಚಯಿಸಲಾಗಿದೆ.

ಹೈಕೋರ್ಟ್​ನ ನಿರ್ದೇಶನದ ಮೇರೆಗೆ ಈ ಯೋಜನೆ ರೂಪಿಸಲಾಗಿದೆ. ಎಲ್ಲೆಲ್ಲಿ ಮರಗಳು ಒಣಗಿವೆ ಎಂಬುದನ್ನು ಗುರುತಿಸಿ, ಆ ಸ್ಥಳಕ್ಕೆ ತೆರಳಿ ಮರಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿ ಪಾಲಿಕೆಯ ತೋಟಗಾರಿಕಾ ಇಲಾಖೆ ನೌಕರರಿಗೆ ವಿಶೇಷ ತರಬೇತಿಯನ್ನೂ ನೀಡಲಾಗಿದೆ. ಚಿಕಿತ್ಸೆ ಒದಗಿಸುವಾಗ ಮರದ ಟೊಳ್ಳಾದ ಭಾಗವನ್ನು ಮೊದಲು ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ. ಜೀವಕೋಶಗಳ ಸಾವಿನಿಂದ ಒಣಗಿದ ಸಿಪ್ಪೆಯನ್ನು ತೆಗೆಯಲಾಗುತ್ತದೆ. ಬಳಿಕ ಕೀಟನಾಶಕ ಔಷಧವನ್ನು ಸಿಂಪಡಿಸಲಾಗುತ್ತದೆ. ಟೊಳ್ಳಾದ ಅಥವಾ ಹಾನಿಗೊಳಗಾದ ಭಾಗದಲ್ಲಿ ಕಾಕ್ ಮೆಶ್ ಅನ್ನು ಇರಿಸಲಾಗುತ್ತದೆ. ಥರ್ಮಾಕೋಲ್ ಅನ್ನು ತುಂಬಿ ಭರ್ತಿ ಮಾಡಲಾಗುತ್ತಿದೆ.

Share Post