National

ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸದರ ವಿವೇಚನಾ ಕೋಟಾಗೆ ತಡೆ

ನವದೆಹಲಿ: ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಸಂಸದರಿಗಿದ್ದ ಕೋಟಾ ಸೇರಿದಂತೆ ಎಲ್ಲ ಬಗೆಯ ವಿವೇಚನಾ ಕೋಟಾಗಳನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆ ತಡೆಹಿಡಿದಿದೆ. ಈ ಸಂಬಂಧ ಎಲ್ಲ ಕೇಂದ್ರೀಯ ವಿದ್ಯಾಲಯಗಳಿಗೆ ಪತ್ರ ಬರೆದಿರುವ ಕೆವಿಎಸ್‌, ಕೇಂದ್ರ ಕಚೇರಿಯ ನಿರ್ದೇಶನದಂತೆ, ಮುಂದಿನ ಆದೇಶದವರೆಗೆ ವಿಶೇಷ ನಿಯಮಗಳಡಿ ಯಾರಿಗೂ ಪ್ರವೇಶ ನೀಡಬಾರದು ಎಂದು ಆದೇಶ ನೀಡಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ 2022–23ನೇ ಸಾಲಿಗೆ ಪ್ರವೇಶ ಪಡೆಯಲು ಜೂನ್‌ವರೆಗೆ ಅವಕಾಶ ಇದೆ.

2021–22ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಕೇಂದ್ರ ಶಿಕ್ಷಣ ಸಚಿವರಿಗಿದ್ದ ವಿವೇಚನಾ ಕೋಟಾವನ್ನು ಕೇಂದ್ರ ಸರ್ಕಾರ ಕಳೆದ ವರ್ಷ ರದ್ದು ಮಾಡಿತ್ತು. ದೇಶದಲ್ಲಿ 1,200 ಕೇಂದ್ರೀಯ ವಿದ್ಯಾಲಯಗಳಿದ್ದು, 14.35 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇವುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕೇಂದ್ರೀಯ ವಿದ್ಯಾಲಯ ಸಂಘಟನೆ ನಿರ್ಧಾರವನ್ನು ಬಿಜೆಪಿ ಸಂಸದ ಸುಶೀಲ್‌ ಮೋದಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಇಂಥ ಕ್ರಮದಿಂದ ದೇಶದಾದ್ಯಂತ ಕೇಂದ್ರೀಯ ವಿದ್ಯಾಲಯಗಳಲ್ಲಿನ 30 ಸಾವಿರ ಸೀಟುಗಳು ಪ್ರವೇಶಕ್ಕೆ ಮುಕ್ತವಾಗಲಿವೆ ಎಂದಿದ್ದಾರೆ. ವಿಶೇಷ ನಿಯಮಗಳ ಪ್ರಕಾರ ಲೋಕಸಭಾ ಸದಸ್ಯರಿಗೆ ವಿವೇಚನಾ ಕೋಟಾ ಇದ್ದು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ತಲಾ 10 ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ನೀಡುವಂತೆ ಶಿಫಾರಸು ಮಾಡಬಹುದಾಗಿತ್ತು.

Share Post