National

ಜೆಎನ್‌ಯುನಲ್ಲಿ ಘರ್ಷಣೆ ವಿಚಾರ; ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌ ದಾಖಲು

ನವದೆಹಲಿ: ನಿನ್ನೆ ರಾತ್ರಿ ಮಾಂಸಾಹಾರದ ವಿಚಾರವಾಗಿ ದೆಹಲಿಯ ಜವಾಹರಲಾಲ್‌ ನೆಹರೂ ವಿವಿಯಲ್ಲಿ ನಡೆದ ಗಲಾಟೆ ಸಂಬಂಧ ದೆಹಲಿ ಪೊಲೀಸರು ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಜೆಎನ್‌ಯುಎಸ್‌ಯು, ಎಸ್‌ಎಫ್‌ಐ, ಡಿಎಸ್‌ಎಫ್ ಮತ್ತು ಎಐಎಸ್‌ಎನ ಕಾರ್ಯಕರ್ತರು ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

     ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಮಾಂಸಾಹಾರದ ವಿಚಾರವಾಗಿ, ಎಬಿವಿಪಿ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು.  ಆರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 341 (ತಪ್ಪು ಸಂಯಮ), 509 (ಮಹಿಳೆಯರ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾತು, ಸನ್ನೆ ಅಥವಾ ಕೃತ್ಯ) ಮತ್ತು 34ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

      ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಗೆ ಸೇರಿದ ವಿದ್ಯಾರ್ಥಿಗಳೂ ಕೂಡಾ ಈಗ ಲಿಖಿತ ದೂರು ನೀಡುವುದಾಗಿ ತಿಳಿಸಿದ್ದಾರೆ. ಅವರ ದೂರನ್ನೂ ಸ್ವೀಕರಿಸಿದ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.

Share Post