ಸಾಕ್ಷಾತ್ ಪರಶಿವನಿಗೆ ಕೋರ್ಟ್ ನೊಟೀಸ್: ವಿಚಾರಣೆಗೆ ಹಾಜರಾಗುವಂತೆ ತಾಕೀತು
ಛತ್ತೀಸ್‌ಗಡ: ತಪ್ಪು ಮಾಡುವ ಜನ ಆ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಆದರೆ ಮನುಷ್ಯ ಮಾಡುವ ತಪ್ಪುಗಳಲ್ಲಿ ದೇವರ ಪಾತ್ರವಿದ್ದರೆ..?! ಆ ದೇವರೂ ನ್ಯಾಯಾಲಯದ ಮುಂದೆ ತಪ್ಪಿತಸ್ಥನಾಗಿ ನಿಂತರೆ ಇದಕ್ಕೆ ದಿಕ್ಯಾರು..? ಛತ್ತೀಸ್‌ಗಢದ ರಾಯಗಡ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡ ಆರೋಪದ ಮೇಲೆ ಶಿವನಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.ಮಾರ್ಚ್ 25 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಶಿವನಿಗೆ ನ್ಯಾಯಾಲಯ ಸೂಚಿಸಿದೆ.
ಏನಿದು ಪ್ರಕರಣ..?
ಸಂಪೂರ್ಣ ವಿವರಕ್ಕೆ ಹೋದರೆ, ಛತ್ತೀಸ್‌ಗಢದ ರಾಯಗಡ ಜಿಲ್ಲೆಯ 25ನೇ ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಸುಧಾ ರಾಜ್‌ವಾಡೆ ಅವರು ಬಿಲಾಸ್‌ಪುರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸರಕಾರಿ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ದೇವಸ್ಥಾನ ನಿರ್ಮಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅರ್ಜಿಯಲ್ಲಿ ಶಿವ ದೇವಾಲಯ ಸೇರಿದಂತೆ 16 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಛತ್ತೀಸ್‌ಗಢ ಹೈಕೋರ್ಟ್, ಘಟನೆಯ ಕುರಿತು ತನಿಖೆ ನಡೆಸಿ ವಾಸ್ತವಾಂಶವನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಫೀಲ್ಡಿಗಿಳಿದ ಸರ್ಕಾರಿ ಅಧಿಕಾರಿಗಳು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದ 10 ಮಂದಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದರು. ಭೂಕಬಳಿಕೆ ಪ್ರಕರಣದಲ್ಲಿ ಮಾ.25ರಂದು ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ ಬಲವಂತವಾಗಿ ಜಾಗ ಖಾಲಿ ಮಾಡಿಸಲಾಗುವುದು ಹಾಗೂ 10 ಸಾವಿರ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಆದರೆ, ಈ ನೋಟೀಸ್ ಪಡೆದ ಆರನೇ ವ್ಯಕ್ತಿ ಪರಮಶಿವನಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ, ಶಿವನ ದೇವಸ್ಥಾನವೇ ತಪ್ಪಿತಸ್ಥ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಲೆಕ್ಕಾಚಾರದ ಪ್ರಕಾರ ದೇವಸ್ಥಾನ ನಿರ್ಮಿಸಿದವರು ಅಥವಾ ಟ್ರಸ್ಟಿಗಳು ವಿಚಾರಣೆಗೆ ಹಾಜರಾಗಬೇಕಾಗುತ್ತದೆ.