NationalScienceTechTechnology

CHANDRAYANA-3 EXPLAINER: ಚಂದ್ರನ ಮೇಲೆ 1 ದಿನ ಅಂದ್ರೆ ಭೂಮಿ ಮೇಲೆ ಅದು 29 ದಿನ..!

ಶ್ರೀಹರಿಕೋಟಾ; ನಾವು ಯಾವುದೇ ಶುಭಕಾರ್ಯ ಮಾಡಬೇಕಾದರೂ ಮುಹೂರ್ತ ನೋಡುತ್ತೇವೆ. ಅಶುಭಕಾರ್ಯಗಳನ್ನೂ ಕೂಡಾ ಮುಹೂರ್ತ ನೋಡಿಯೇ ಮಾಡುವ ಪರಿಪಾಠ ನಮ್ಮಲ್ಲಿದೆ. ಪ್ರಪಂಚದಾದ್ಯಂತ ಇಂತಹ ಅನೇಕ ಸಂಪ್ರದಾಯಗಳು ಎಲ್ಲಾ ಧರ್ಮಗಳಲ್ಲೂ ನಡೆದುಕೊಂಡು ಬಂದಿವೆ. 

ಸಾಮಾನ್ಯವಾಗಿ ಹಿಂದೂ ಪಂಚಾಂಗಗಳು ಹಾಗೂ ಕ್ಯಾಲೆಂಡರ್‌ಗಳನ್ನು ಚಂದ್ರನ ಚಲನೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಅಂದ್ರೆ ಎಲ್ಲಾ ರೀತಿಯ ಮುಹೂರ್ತಗಳೂ ಚಂದ್ರ ಸುತ್ತ ಸುತ್ತುತ್ತವೆ ಎಂದರ್ಥ. ಹಾಗಿದ್ಮೇಲೆ ಚಂದ್ರ ಮೇಲೆ ಹೋಗುವ ಪ್ರಯಾಣಕ್ಕೆ ಯಾವ ಲೆಕ್ಕದ ಪ್ರಕಾರ ಮುಹೂರ್ತ ಇಡಲಾಗುತ್ತದೆ ಅನ್ನೋದು ನಿಮಗೆ ಗೊತ್ತಾ..?

ನಾಳೆ ಚಂದ್ರಯಾನ-೩ ಉಡಾವಣೆಗೆ ಇಸ್ರೋ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳೆ (ಜುಲೈ 14) ಮಧ್ಯಾಹ್ನ 2 ಗಂಟೆ 35 ನಿಮಿಷಕ್ಕೆ ಚಂದ್ರಯಾನ-೩ ಉಡಾವಣೆಯಾಗಲಿದೆ. ಹೀಗಂತ ಇಸ್ರೋ ಮುಖ್ಯಸ್ಥ ಎಸ್‌.ಸ್ವಾಮಿನಾಥನ್‌ ಹೇಳಿದ್ದಾರೆ. ಅಂದಹಾಗೆ, ಚಂದ್ರಯಾನ-೩ ಉಡಾವಣೆ ಬಗ್ಗೆ ಜೂನ್‌ ತಿಂಗಳಲ್ಲೇ ಸ್ವಾಮಿನಾಥನ್‌ ಮಾಹಿತಿ ನೀಡಿದ್ದರು. ಆಗ ಜುಲೈ 13 ರಿಂದ 19ರೊಳಗೆ ಚಂದ್ರಯಾನ-3 ಉಡಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಅನಂತರ ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಸರಿಯಾಗಿ ಚಂದ್ರಯಾನ-೩ ಉಡಾವಣೆಯಾಗುತ್ತೆ ಎಂದು ಟೈಮ್‌ ಫಿಕ್ಸ್‌ ಮಾಡಲಾಗಿದೆ.

ಭೂಮಿಯ ಮೇಲಿನ ಪ್ರಯಾಣ, ಅಂತರಿಕ್ಷ ಪ್ರಯಾಣ ಸೇಮ್‌ ಅಲ್ಲ:

   ನಾವು ಭೂಮಿಯ ಮೇಲೆ ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಪ್ರಯಾಣ ಮಾಡಬೇಕು ಎಂದುಕೊಳ್ಳುತ್ತೇವೆ. ಆಗ ನಾವು ಯಾವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ..? ಉದಾಹರಣೆ ನಾವು ಬೆಂಗಳೂರಿನಿಂದ ಮೈಸೂರು ಹೋಗಬೇಕು ಎಂದಿಟ್ಟುಕೊಳ್ಳಿ. ಆಗ ನಾವು ಬಸ್‌, ಟ್ರೈನ್‌, ವಿಮಾನ, ಸ್ವಂತ ವಾಹನ ಯಾವುದಾದರೊಂದು ಆಯ್ಕೆ ಮಾಡಿಕೊಳ್ಳುತ್ತೇವೆ. ನಾವು ಬೆಂಗಳೂರಿನಿಂದ ಮೈಸೂರಿಗೆ ಹೋಗಲು ನಾವು ತೆರಳುತ್ತಿರುವ ವಾಹನದ ವೇಗದ ಆಧಾರದ ಮೇಲೆ ಮೈಸೂರು ಎಷ್ಟು ಸೇರುತ್ತೇವೆ ಎಂಬುದು ಗೊತ್ತಾಗುತ್ತದೆ.

  ಅಂದರೆ ಭೂಮಿಯ ಮೇಲೆ ನಮಗೆ ಎಷ್ಟು ವೇಗದಲ್ಲಿ ಪ್ರಯಾಣ ಮಾಡಬೇಕು, ಎಷ್ಟು ಸಮಯಕ್ಕೆ ಸೇರಬೇಕು ಅನ್ನೋದು ನಮ್ಮ ಕೈಯಲ್ಲೇ ಇರುತ್ತದೆ,. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕು ಅಂದ್ರೆ, ನಾವು ಪ್ರಯಾಣ ಮಾಡುವ ವೇಗ ಹಾಗೂ ಆ ಸ್ಥಳದ ದೂರದ ಮೇಲೆ ಆಧರಿಸಿರುತ್ತದೆ.

  ಆದ್ರೆ ಈಗಾಗಲೇ ಒಂದು ವಾಹನ ಮೈಸೂರಿಗೆ ಹೋಗುತ್ತಿದೆ. ಅದರಲ್ಲಿ ನಮಗೆ ಬೇಕಾದ ವ್ಯಕ್ತಿಯೊಬ್ಬ ಪ್ರಯಾಣ ಮಾಡುತ್ತಿದ್ದಾನೆ. ಅದು ಬಸ್‌ ಎಂದು ಇಟ್ಟುಕೊಳ್ಳೋಣ. ಆ ವ್ಯಕ್ತಿ ಹೊರಡುವಾಗ ಒಂದು ವಸ್ತುವನ್ನು ಇಲ್ಲೇ ಬಿಟ್ಟು ಹೋಗಿದ್ದಾನೆ. ಹೀಗಾಗಿ ನೀವು ಆ ವಸ್ತುವನ್ನು ತೆಗೆದುಕೊಂಡು ಕಾರಿನಲ್ಲಿ ಹಿಂಬಾಲಿಸುತ್ತೀರಿ. ಆಗ, ಆ ಬಸ್‌ನ್ನು ನೀವು ಮುಟ್ಟಬೇಕೆಂದರೆ ಆ ಬಸ್‌ ಹೋಗುತ್ತಿರುವ ವೇಗಕ್ಕಿಂತ ಇನ್ನೂ ಜಾಸ್ತಿ ವೇಗವಾಗಿ ನೀವು ಕಾರು ಓಡಿಸಬೇಕು. ಆಗಲೇ ಬಸ್‌ನ್ನು ಚೇಸ್‌ ಮಾಡೋದಕ್ಕೆ ಸಾಧ್ಯವಾಗುತ್ತದೆ.

  ಅಂದರೆ ಒಂದು ಸ್ಥಿರವಾದ ಸ್ಥಳದಿಂದ ಪ್ರಯಾಣ ಮಾಡುತ್ತಿರುವ ವಾಹನವನ್ನು ತಲುಪಲು ಅದು ಹೋಗುತ್ತಿರುವ ವೇಗ ಹಾಗೂ ನಾವು ಹಿಂಬಾಲಿಸುತ್ತಿರುವ ವೇಗ ಎರಡನ್ನೂ ಪರಿಗಣಿಸಬೇಕಾಗುತ್ತದೆ. ಅಂದರೆ ಅದನ್ನು ಸಾಪೇಕ್ಷ ವೇಗ ಎಂದು ಕರೆಯಲಾಗುತ್ತದೆ.

   ಬಾಹ್ಯಾಕಾಶ ಪ್ರಯಾಣ ಅಂದ್ರೆ ಭೂಮಿಯ ಗರುತ್ವಾಕರ್ಷಣೆಯನ್ನು ಮೀರಿಸಿ ಮೇಲಕ್ಕೆ ಹೋಗುವುದು. ಅಂತರಿಕ್ಷದೊಳಗೆ ಸ್ಯಾಟಲೈಟ್‌ಗಳನ್ನು ಕೊಂಡೊಯ್ಯುವ ರಾಕೆಟ್‌ಗಳು ಲಾಂಚಿಂಗ್‌ ಪ್ಯಾಡ್‌ನಿಂದ ಆಕಾಶಕ್ಕೆ ವೃತ್ತಾಕಾರದ ಮಾರ್ಗದಲ್ಲಿ ಅವುಗಳನ್ನು ನಿರ್ದಿಷ್ಟ ಕಕ್ಷೆಗೆ ಸೇರಿಸುತ್ತವೆ. ಇನ್ನು ಇವೆಲ್ಲಕ್ಕಿಂತ ಗ್ರಹಾಂತರ ಯಾನ ಇನ್ನೂ ಕೊಂಚ ಭಿನ್ನವಾಗಿರುತ್ತದೆ. ಏಕೆಂದರೆ ನಮಗೆ ಭೂಮಿ ಸ್ಥಿರವಾಗಿರುವಂತೆ ಅನಿಸುತ್ತದೆ. ಆದರೆ ಭೂಮಿಯು ಅಂಡಾಕಾರದ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತದೆ. ಚಂದ್ರನು ಕೂಡ ಅದೇ ರೀತಿಯಲ್ಲಿ ಭೂಮಿಯ ಸುತ್ತ ಸುತ್ತುತ್ತಾನೆ.

   ಅಂದರೆ ನೀವು ನೇರವಾಗಿ ಅಥವಾ ಅಡ್ಡಲಾಗಿ ರಾಕೆಟ್ ಅನ್ನು ಓಡಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನನ್ನು ತಲುಪಬೇಕಾದರೆ  ಅಷ್ಟರೊಳಗೆ ಚಂದ್ರನು ತನ್ನ ಕಕ್ಷೆಯಲ್ಲಿ ತಿರುಗುತ್ತಾ, ಯಾವ ಸ್ಥಳಕ್ಕೆ ಹೋಗುತ್ತಾನೋ ಅಲ್ಲಿಗೆ ನಾವು ಹೋಗಬೇಕೆಂದೆರೆ ಈಗಿನಿಂದಲೇ ನಾವು ಪ್ರಯಾಣ ಶುರು ಮಾಡಬೇಕಾಗುತ್ತದೆ.

   ಭೂಮಿಯಿಂದ ಬಾಹ್ಯಾಕಾಶದಲ್ಲಿ ಭೂಮಿಯ ಕಕ್ಷೆಗೆ ಹೋಗುವವರೆಗೂ ಎದುರಾಗುವ ಕೆಲ ಪರಿಸ್ಥಿತಿಗಳನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅಂದ್ರೆ ಉಡಾವಣೆ ದಿನಾಂಕದಂದಿನ ವಾತಾವರಣದ ಜೊತೆಗೆ ಸೌರ ಕುಟುಂಬದಲ್ಲಿ ಭೂಮಿಯ ಸ್ಥಾನ ಮತ್ತು ಚಂದ್ರನ ಸ್ಥಾನಗಳನ್ನು ಖಗೋಳ ದೂರದ ಆಧಾರದ ಮೇಲೆ ಲೆಕ್ಕ ಹಾಕಬೇಕಾಗುತ್ತದೆ.

  ಚಂದ್ರಯಾನ 3, ಇದು ಭೂಮಿಯ ಸುತ್ತ ಸುತ್ತುತ್ತದೆ ಮತ್ತು ಕ್ರಮೇಣ ತನ್ನ ಅಪೋಜಿಯನ್ನು ಹೆಚ್ಚಿಸುತ್ತದೆ…. ಚಂದ್ರನ ಸ್ಥಾನವು ಭೂಮಿಯ ಗುರುತ್ವಾಕರ್ಷಣೆಯನ್ನು ಮೀರಿ ಚಂದ್ರನ ಕಡೆಗೆ ಯಾವಾಗ ಪ್ರಯಾಣವನ್ನು ಪ್ರಾರಂಭಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಇದನ್ನೆಲ್ಲ ಖಗೋಳಶಾಸ್ತ್ರದಲ್ಲಿ ಲೆಕ್ಕ ಹಾಕಿದ ನಂತರ… ಚಂದ್ರಯಾನ 3 ಪೇಲೋಡ್ ನ್ನು ಮತ್ತೆ ಉರಿಸಿ ಚಂದ್ರನ ಕಕ್ಷೆಗೆ ಸೇರಿಸಲಾಗುತ್ತದೆ.

 

ಒಂದು ದಿನ ತಡವಾದರೂ ಒಂದು ತಿಂಗಳು ಕಾಯಲೇಬೇಕು..?

ಜುಲೈ 14 ರಂದು ಆಕಾಶದತ್ತ ಲಗ್ಗೆ ಇಡುವ ಚಂದ್ರಯಾನ 3, ಪರಿಸ್ಥಿತಿಗಳಿಗೆ ಅನುಗುಣವಾಗಿ ಆಗಸ್ಟ್ 23 ಅಥವಾ ಆಗಸ್ಟ್ 24 ರಂದು ಚಂದ್ರನ ಮೇಲೆ ಲ್ಯಾಂಡ್‌ ಆಗುವಂತೆ ಲ್ಯಾಂಡರ್ ಅನ್ನು ಉಡಾವಣೆ ಮಾಡುತ್ತೇವೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ಚಂದ್ರನ ಮೇಲೆ ಇಳಿಯಲು ಎಲ್ಲಾ ರೀತಿಯ ಅನುಕೂಲವಿದ್ದಲ್ಲಿ ಮಾತ್ರ ಆಗಸ್ಟ್ 23 ರಂದು ಇಳಿಯಲು ಪ್ರಯತ್ನಿಸುತ್ತೇವೆ. ಇಲ್ಲದಿದ್ದರೆ ಇನ್ನೊಂದು ತಿಂಗಳ ನಂತರ ಇಳಿಸಲು ಪ್ರಯತ್ನಿಸುತ್ತೇವೆ ಎಂದು ಸೋಮನಾಥ್ ಹೇಳಿದ್ದಾರೆ. ಚಂದ್ರನ ಮೇಲೆ ಲ್ಯಾಂಡರ್ ಕಳುಹಿಸಲು ಯಾವ ದಿನ ಅಂದ್ರೆ ಆ ದಿನ ಕಳುಹಿಸೋದಕ್ಕೆ ಆಗೋದಿಲ್ಲ.  ಚಂದ್ರನ ಹಂತಗಳನ್ನು ಅವಲಂಬಿಸಿ, ಲ್ಯಾಂಡರ್ ಅನ್ನು ಅದರ ಮೇಲೆ ಇಳಿಸಬೇಕು.

ಏಕೆಂದರೆ ಚಂದ್ರನ ಮೇಲೆ ಇಳಿದು ಸಂಶೋಧನೆ ಮಾಡುವ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್ ಕೆಲಸ ಮಾಡಲು ವಿದ್ಯುತ್ ಅಗತ್ಯವಿದೆ. ಲ್ಯಾಂಡರ್‌ಗಳು ಮತ್ತು ರೋವರ್‌ಗಳು ಸೋಲಾರ್ ಪ್ಯಾನೆಲ್‌ಗಳಿಂದ ಮಾತ್ರ ಆ ವಿದ್ಯುತ್ ಅನ್ನು ಪಡೆಯಬಹುದು. ಅಂದರೆ ಲ್ಯಾಂಡರ್ ಇಳಿಯುವ ಹೊತ್ತಿಗೆ ಸೂರ್ಯನ ಬೆಳಕು ಇರಬೇಕು. ಇದರರ್ಥ ಲ್ಯಾಂಡಿಂಗ್ ಚಂದ್ರನ ಮೇಲೆ ಹಗಲು ಹೊತ್ತಿನಲ್ಲಿ ನಡೆಯಬೇಕು.

 

ಚಂದ್ರನ ಮೇಲೆ ಒಂದು ದಿನ ಅಂದ್ರೆ ಭೂಮಿಯ ಮೇಲೆ ಅದು 29 ದಿನಗಳು!

ಭೂಮಿಯ ಮೇಲಿನ ಒಂದು ದಿನವು ಹಗಲು ರಾತ್ರಿ ಸೇರಿದಂತೆ 24 ಗಂಟೆಗಳು. ಚಂದ್ರನು ಸ್ವಯಂ ಪ್ರಕಾಶಕನಲ್ಲ. ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದಾಗ, ಬೆಳಕು ಪ್ರತಿಫಲಿಸುತ್ತದೆ ಮತ್ತು ಚಂದ್ರನು ನಮಗೆ ಪ್ರಕಾಶಮಾನವಾಗಿ ಕಾಣಿಸುತ್ತಾನೆ. ಆದರೆ ಭೂಮಿಯ ಮೇಲಿನ ಒಂದು ದಿನ ಮತ್ತು ಚಂದ್ರನ ಒಂದು ದಿನ ತುಂಬಾ ವಿಭಿನ್ನವಾಗಿದೆ. ಚಂದ್ರನ ಮೇಲಿನ ಒಂದು ದಿನ ಭೂಮಿಯ ಮೇಲೆ ಸರಿಸುಮಾರು 29 ದಿನಗಳಿಗೆ ಸಮನಾಗಿರುತ್ತದೆ.

ಅಂದರೆ ಚಂದ್ರನ ಮೇಲೆ ಒಂದು ದಿನ ಸುಮಾರು 14 ದಿನಗಳು. ಆ 14 ದಿನಗಳು ಮಾತ್ರ ಅಲ್ಲಿ ಸೂರ್ಯನ ಬೆಳಕು ಸಿಗುತ್ತದೆ. ಅಂದರೆ ಆ 14 ದಿನಗಳ ಕಾಲ ಮಾತ್ರ ಲ್ಯಾಂಡರ್ ಮತ್ತು ರೋವರ್‌ಗಳಿಗೆ ಅಗತ್ಯವಿರುವ ಸೌರಶಕ್ತಿ ಸಿಗುತ್ತದೆ. ಅದಕ್ಕಾಗಿಯೇ ಚಂದ್ರಯಾನ 2 ಮತ್ತು ಚಂದ್ರಯಾನ 3 ರಲ್ಲಿ ಚಂದ್ರನ ಮೇಲೆ ಕಳುಹಿಸಲಾದ ಲ್ಯಾಂಡರ್ ಮತ್ತು ರೋವರ್‌ಗಳ ಜೀವಿತಾವಧಿಯು ಕೇವಲ 14 ದಿನಗಳು ಎಂದು ಇಸ್ರೋ ಹೇಳಿದೆ.

ಚಂದ್ರಯಾನ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಚಂದ್ರನ ಮೇಲಿನ ಹಂತಗಳ ಪ್ರಕಾರ, ಆ ಪ್ರದೇಶದಲ್ಲಿ ಹಗಲು ಆಗಸ್ಟ್ 24 ರಂದು ಪ್ರಾರಂಭವಾಗುತ್ತದೆ. ಹಾಗಾಗಿ ಅಂದು ಲ್ಯಾಂಡಿಂಗ್ ಆಗುವುದಾದರೆ… ಅಲ್ಲಿಂದ ಅಲ್ಲಿ ಬೀಳುವ ಸೂರ್ಯನ ಬೆಳಕನ್ನು ಆಧರಿಸಿ ಲ್ಯಾಂಡರ್ ಗರಿಷ್ಠ 14 ದಿನಗಳ ಕಾಲ ಕಾರ್ಯನಿರ್ವಹಿಸಬಹುದು. ಒಂದು ದಿನ ತಡವಾದರೂ ಲ್ಯಾಂಡರ್ ಕೆಲಸ ಮಾಡುವ ಅವಕಾಶ ಒಂದು ದಿನ ಕಡಿಮೆಯಾಗುತ್ತದೆ.

615 ಕೋಟಿ ರೂ.ಗಳ ಚಂದ್ರಯಾನ ಪ್ರಯೋಗದಲ್ಲಿ ನಾವು ಚಂದ್ರನ ಮೇಲೆ ಸಂಶೋಧನೆ ಮಾಡಬೇಕಾದ ಪ್ರತಿ ಕ್ಷಣವೂ ಸಾರ್ಥಕ. ಅದಕ್ಕಾಗಿಯೇ ಆಗಸ್ಟ್ 24 ರಂದು ಲ್ಯಾಂಡಿಂಗ್ ಸಾಧ್ಯವಾಗದಿದ್ದರೆ, ಮತ್ತೆ ಚಂದ್ರನ ಮೇಲೆ ದಿನ ಪ್ರಾರಂಭವಾಗುವವರೆಗೆ ಅಂದರೆ ಸೆಪ್ಟೆಂಬರ್ 23 ರವರೆಗೆ ಇನ್ನೂ ಒಂದು ತಿಂಗಳು ಕಾಯಬೇಕಾಗುತ್ತದೆ.

ಬಿಸಿಲಿನ ಸ್ಥಳದಲ್ಲಿ ಚಂದ್ರಯಾನ ಉಡಾವಣೆಯಲ್ಲಿ ಲ್ಯಾಂಡರ್ ಮತ್ತು ರೋವರ್‌ಗಳು ಗರಿಷ್ಠ ಸಮಯ ಕೆಲಸ ಮಾಡಬೇಕು. ಅದಕ್ಕಾಗಿಯೇ ಅವುಗಳನ್ನು ಚಂದ್ರನ ಮೇಲೆ ದೀರ್ಘಕಾಲ ಸೂರ್ಯನ ಬೆಳಕು ಇರುವ ಸ್ಥಳದಲ್ಲಿ ಇಳಿಸಬೇಕು.

ಆಗಸ್ಟ್ 24ರ ವೇಳೆಗೆ ಚಂದ್ರಯಾನ ಮಿಷನ್ ಚಂದ್ರನ ಮೇಲ್ಮೈಯಲ್ಲಿ 100 ಕಿ.ಮೀ ಎತ್ತರದಲ್ಲಿ ಇಳಿಯಬೇಕಾದರೆ, ಅದರಂತೆ ಭೂಮಿಯಿಂದ ರಾಕೆಟ್ ಹೊರಡುವ ಸಮಯವನ್ನು ಖಗೋಳಶಾಸ್ತ್ರದಿಂದಲೂ ನಿರ್ಧರಿಸಬೇಕು. ಹೀಗಾಗಿ ಖಗೋಳ ನಿಯಮಗಳು, ಭೂಮಿ, ಚಂದ್ರನ ಚಲನೆ, ಚಂದ್ರನ ಮೇಲೆ ಚಂದ್ರಯಾನ 3 ಲ್ಯಾಂಡರ್, ರೋವರ್ ಲ್ಯಾಂಡ್ ಆಗುವ ದಿನ ಪ್ರಾರಂಭವಾಗುವ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಚಂದ್ರಯಾನದಂತಹ ಪ್ರಯೋಗಗಳಿಗೆ ಉಡಾವಣಾ ಸಮಯವನ್ನು ನಿರ್ಧರಿಸಲಾಗುತ್ತದೆ.

Share Post