ಪ್ರಧಾನಿ ಮೋದಿ ವಿರುದ್ಧ ವಿವಾದಿತ ಟ್ವೀಟ್; ಶಾಸಕ ಜಿಗ್ನೇಶ್ ಮೇವಾನಿ ಪೊಲೀಸ್ ವಶಕ್ಕೆ
ಅಹಮದಾಬಾದ್: ದಲಿತ ಹೋರಾಟಗಾರ ಹಾಗೂ ಶಾಸಕ ಜಿಗ್ನೇಶ್ ಮೆವಾನಿಯರವನ್ನು ಅಸ್ಸಾಂ ಪೊಲೀಸರು ಕಳೆದ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವಿವಾದಿತ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಜಿಗ್ನೇಶ್ ಮೇವಾನಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಗೋಡ್ಸೆಯನ್ನು ದೇವರಾಗಿ ಕಾಣುವ ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ನಲ್ಲಿ ಕೋಮುಗಳ ನಡುವಿನ ಸಂಘರ್ಷದ ವಿರುದ್ಧ ಮಾತನಾಡಬೇಕು, ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಬೇಕು ಎಂಬ ರೀತಿಯಲ್ಲಿ ಜಿಗ್ನೇಶ್ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಗ್ನೇಶ್ ವಿರುದ್ಧ ದೂರು ದಾಖಲಾಗಿತ್ತು. ನಾಲ್ವರು ಅಸಾಂ ಪೊಲೀಸರು, ಪಾಲನ್ಪುರ್‌ನ ಅತಿಥಿ ಗೃಹದಲ್ಲಿದ್ದ ಜಿಗ್ನೇಶ್ ಅವರನ್ನು ವಶಕ್ಕೆ ಪಡೆದಿದೆ.
ಜಿಗ್ನೇಶ್ ಅವರ ವಿರುದ್ಧದ ಆರೋಪಗಳ ಬಗ್ಗೆ ಮೊದಲು ಪೊಲೀಸರು ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಅನಂತರ ಟ್ವೀಟ್‌ಗಳ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಜಿಗ್ನೇಶ್ ಅವರನ್ನು ವಶಕ್ಕೆ ಪಡೆಯುತ್ತಿರುವ ಬಗ್ಗೆ ದಾಖಲೆ ಬಹಿರಂಗ ಪಡಿಸಿದ್ದಾರೆ. ಅಸ್ಸಾಂ ಕೋಕರಾಝಾರ್ ಜಿಲ್ಲೆಯಲ್ಲಿ ಅನುಪ್ ಕುಮಾರ್ ಡೇ ಎಂಬುವವರು ಜಿಗ್ನೇಶ್ ಅವರ ವಿರುದ್ಧ ದೂರು ನೀಡಿದ್ದಾರೆ. ಸೆಕ್ಷನ್ 120ಬಿ (ಅಪರಾಧ ಸಂಚು), ಸೆಕ್ಷನ್ 153 (ಎ) (ಎರಡು ಸಮುದಾಯಗಳ ನಡುವೆ ದ್ವೇಷ ಹಂಚುವುದು), 295 (ಎ) (ಧಾರ್ಮಿಕ ಭಾವನೆಗೆ ಧಕ್ಕೆ ತರಲು ಪ್ರಾರ್ಥನಾ ಸ್ಥಳಕ್ಕೆ ಕಳಂಕ ಉಂಟು ಮಾಡುವುದು), 506 (ಅಪರಾಧದ ಬೆದರಿಕೆ) ಹಾಗೂ ಐಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.