ನಾವು ನಿರ್ಮಾಣ ಮಾಡಿದ ಸ್ಟೇಡಿಯಂನಲ್ಲಿ ನಿಮ್ಮ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ: ಅಖಿಲೇಶ್ ಲೇವಡಿ
ಉತ್ತರಪ್ರದೇಶ: ಯುಪಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರ ಹಿಡಿದ ಪಕ್ಷವಾಗಿ ಹೊರಹೊಮ್ಮಿದೆ. ಯೋಗಿ ಆದಿತ್ಯನಾಥ್ ಶುಕ್ರವಾರ (ಮಾರ್ಚ್ 25) ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 37 ವರ್ಷಗಳಲ್ಲಿ ರಾಜ್ಯದ ಯಾವ ಸಿಎಂ ಈ ಸಾಧನೆ ಮಾಡಿಲ್ಲ. ಈ ಸಂದರ್ಭದಲ್ಲಿ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಯೋಗಿ ಎರಡನೇ ಬಾರಿಗೆ ಯುಪಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಯೋಗಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಈ ನಡುವೆ ಯುಪಿ ವಿರೋಧ ಪಕ್ಷದ ನಾಯಕ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಟ್ವಿಟರ್‌ನಲ್ಲಿ ಯೋಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ. ಯೋಗಿ ಅವರ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದೆ. ನಮ್ಮ ಅವಧಿಯಲ್ಲಿ ನಿರ್ಮಾಣವಾದ ಕ್ರೀಡಾಂಗಣದಲ್ಲಿ ನಿಮ್ಮ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಆಗಿದೆ ಎಂದು ಅಖಿಲೇಶ್ ಲೇವಡಿ ಮಾಡಿದ್ರು.
नई सरकार को बधाई कि वो सपा के बनाए स्टेडियम में शपथ ले रही है। शपथ सिर्फ़ सरकार बनाने की नहीं, जनता की सच्ची सेवा की भी लेनी चाहिए।
— Akhilesh Yadav (@yadavakhilesh) March 25, 2022
ಈ ಪ್ರಮಾಣ ವಚನ ಹೊಸ ಸರ್ಕಾರ ರಚನೆಗಾಗಿ ಅಲ್ಲ. ಜನರ ಒಳಿತಿಗಾಗಿ ಅವರ ಸೇವೆಗಾಗಿ ನಿಮ್ಮ ಪ್ರಮಾಣ ವಚನ ಸ್ವೀಕಾರ ಆಗಬೇಕು ಎಂದಿದ್ದಾರೆ. ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. 2018 ರಲ್ಲಿ ಅಖಿಲೇಶ್ ಸರ್ಕಾರವು ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರ ಹೆಸರನ್ನು ಈ ಕ್ರೀಡಾಂಗಣಕ್ಕೆ ನಾಮಕರಣ ಮಾಡಿತು. ಈ ಕ್ರೀಡಾಂಗಣದಲ್ಲಿ ಟಿ20 ಪಂದ್ಯವೂ ಕೂಡ ನಡೆದಿದೆ. 50,000 ಆಸನ ಸಾಮರ್ಥ್ಯದೊಂದಿಗೆ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ.