National

ಅಗ್ನಿವೀರರಿಗೆ ರಕ್ಷಣಾ ಇಲಾಖೆ ನೇಮಕಾತಿಯಲ್ಲಿ ಶೇ.10 ಉದ್ಯೋಗ ಮೀಸಲಾತಿ

ನವದೆಹಲಿ; ಅಲ್ಪಾವಧಿಯ ಈ ನೇಮಕಾತಿ ಯೋಜನೆ ವಿರುದ್ಧ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಹಲವೆಡೆ ಹಿಂಸಾಚಾರ ಸಂಭವಿಸಿದೆ. ಈ ನಡುವೆ ಅಗ್ನಿವೀರ್‌ ಯೋಜನೆಯಡಿ ನೇಮಕವಾಗುವವರಿಗೆ ರಕ್ಷಣಾ ಇಲಾಖೆ ಉದ್ಯೋಗ ಮೀಸಲಾತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಗ್ನಿವೀರರಿಗೆ ರಕ್ಷಣಾ ಇಲಾಖೆಯಲ್ಲಿ ಶೇಕಡಾ 10ರಷ್ಟು ಉದ್ಯೋಗ ಮೀಸಲಿಡುವ ಪ್ರಸ್ತಾವವನ್ನು ಸಚಿವ ರಾಜನಾಥ ಸಿಂಗ್‌ ಅವರು ಅನುಮೋದಿಸಿದ್ದಾರೆ.

ಭಾರತೀಯ ಕರಾವಳಿ ಕಾವಲು ಪಡೆ, ನಾಗರಿಕ ರಕ್ಷಣಾ ಹುದ್ದೆಗಳು ಮತ್ತು ಎಲ್ಲಾ 16 ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಶೇ 10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲಾಗುವುದು. ಮಾಜಿ ಸೈನಿಕರಿಗೆ ಈಗಾಗಲೇ ನೀಡಲಾಗುತ್ತಿರುವ ಮೀಸಲಾತಿಯ ಜೊತೆಗೇ ಈ ಹೊಸ ಮೀಸಲಾತಿಯನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುತ್ತದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು ತಮ್ಮ ನೇಮಕಾತಿ ನಿಯಮಗಳಿಗೆ ಇದೇ ರೀತಿಯ ತಿದ್ದುಪಡಿಗಳನ್ನು ಮಾಡಲು ಸಲಹೆ ನೀಡಲಾಗುವುದು. ಅಗತ್ಯವಿದ್ದಲ್ಲಿ ವಯೋಮಿತಿ ಸಡಿಲಿಕೆಯನ್ನೂ ಮಾಡಲಾಗುವುದು ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸೈನಿಕರ ನೇಮಕಕ್ಕಾಗಿ ‘ಅಗ್ನಿಪಥ’ ಎಂಬ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ. ಇದರೊಂದಿಗೆ ಸೈನಿಕರ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆ ಉಂಟಾಗಲಿದೆ.

ಸೈನಿಕರ ಸಂಬಳ ಮತ್ತು ಪಿಂಚಣಿಯಿಂದಾಗಿ ಸರ್ಕಾರದ ಮೇಲೆ ಬಿದ್ದಿರುವ ಹೊರೆ ಕಡಿಮೆ ಮಾಡಿಕೊಳ್ಳುವುದು ಹಾಗೂ ಸಶಸ್ತ್ರ ಪಡೆಗಳು ಹೆಚ್ಚು ತಾರುಣ್ಯಯುತವಾಗಿ ಇರುವಂತೆ ನೋಡಿಕೊಳ್ಳುವುದು ಹೊಸ ಯೋಜನೆಯ ಉದ್ದೇಶ ಎಂದು ಹೇಳಲಾಗಿದೆ. ಈ ಯೋಜನೆಯಡಿಯಲ್ಲಿ ನೇಮಕಗೊಂಡವರ ಕಾರ್ಯಾವಧಿ 4 ವರ್ಷಗಳಾಗಿರಲಿದ್ದು, ನಂತರ ಕಡ್ಡಾಯ ನಿವೃತ್ತಿ ಇರಲಿದೆ.

Share Post