National

ಉಚಿತ ಎಂಬ ಕಾರಣಕ್ಕೆ 33 ಗಂಟೆ ಬಸ್‌ನಲ್ಲೇ ಸುತ್ತಾಡಿದ ವಿದ್ಯಾರ್ಥಿನಿ

ಹೈದರಾಬಾದ್‌; ಕರ್ನಾಟಕದಂತೆ ತೆಲಂಗಾಣದಲ್ಲೂ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಯೋಜನೆ ಜಾರಿಗೆ ತರಲಾಗಿದೆ. ಹೀಗಾಗಿ ತೆಲಂಗಾಣದಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ವಿನಾಕಾರಣ ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ನಡುವೆ ಗಾಬರಿ ಹುಟ್ಟಿಸುವ ಒಂದು ಘಟನೆ ನಡೆದಿದೆ. ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸತತವಾಗಿ 33 ಗಂಟೆಗಳ ಕಾಲ ಉಚಿತ ಸಾರಿಗೆ ಬಸ್‌ಗಳಲ್ಲಿ ಓಡಾಡಿದ್ದಾರೆ. ಕ್ರಿಸ್‌ಮಸ್‌ ರಜೆಗೆ ಮನೆಗೆ ಬಂದಿದ್ದ 13 ವರ್ಷದ ಬಾಲಕಿ ವಾಪಸ್‌ ಹಾಸ್ಟೆಲ್‌ಗೆ ಹೋಗಲು ಬಸ್‌ ಹತ್ತಿದ್ದಳು. ಆದ್ರೆ ಆಕೆ ಹಾಸ್ಟೆಲ್‌ಗೆ ಹೋಗದೇ ಬಸ್‌ಗಳಲ್ಲೇ ಸುತ್ತಾಡುತ್ತಾ ಪೋಷಕರಿಗೆ ಗಾಬರಿ ಹುಟ್ಟಿಸಿದ್ದಳು. 

ಬಾಲಕಿ ಕರೀಂನಗರದ ಅಜ್ಜಿ ಮನೆಗೆ ಬಂದಿದ್ದಳು. ಅನಂತರ ಹಾಸ್ಟೆಲ್‌ ಹೋಗೋದಾಗಿ ಬಸ್‌ ಹತ್ತಿದ್ದ ಆಕೆ ಹಾಸ್ಟೆಲ್‌ ಹೋಗದೇ ಕಾಣೆಯಾಗಿದ್ದಳು. ಬಾಲಕಿಯ ತಂದೆ ಮಗಳಿಗಾಗಿ ಹೈದರಾಬಾದ್‌ ಬಳಿ ಕಾಯುತ್ತಿದ್ದರು. ಆದ್ರೆ ಆಕೆ ಆ ಬಸ್‌ನಲ್ಲಿ ಬಂದಿರಲಿಲ್ಲ. ಮಧ್ಯದಲ್ಲೇ ಇಳಿದಿದ್ದ ಬಾಲಕಿ ಬೇರೆ ಬಸ್‌ ಹತ್ತಿದ್ದಳು.

ಬಾಲಕಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಾಲಕಿಯ ಫೋಟೋ ಹಿಡಿದು ಹುಡುಕಾಟ ನಡೆಸಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಫೋಟೋ ನೋಡಿ ಯುವಕನೊಬ್ಬ ಬಾಲಕಿಯನ್ನು ಕರೀಂನಗರದಲ್ಲಿ ನೋಡಿದ್ದಾಗಿ ಹೇಳಿದ್ದಾನೆ.

ಹೈದರಾಬಾದ್ ಪೊಲೀಸರು ಹಲವು ಸಾರಿಗೆ ಬಸ್‌ಗಳ ಹಿರಿಯ ಅಧಿಕಾರಿಗಳನ್ನ ವಿಚಾರಿಸಿದಾಗ 8ನೇ ತರಗತಿ ವಿದ್ಯಾರ್ಥಿನಿ ಬಸ್‌ಗಳಲ್ಲಿ ಸಂಚರಿಸಿರೋ ವಿಷಯ ಗೊತ್ತಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಬಾಲಕಿಯ ಗುರುತು ಪತ್ತೆಯಾಗಿದೆ. ಕೊನೆಯದಾಗಿ ಸಾರಿಗೆ ಬಸ್‌ನಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ.

ಯಾಕೆ ಹೀಗೆ ಮಾಡಿದೆ ಎಂದು ಕೇಳಿದ್ದಕ್ಕೆ ನನಗೆ ಹಾಸ್ಟೆಲ್‌ಗೆ ಹೋಗಲು ಇಷ್ಟವಿರಲಿಲ್ಲ. ಬಸ್‌ನಲ್ಲಿ ಪ್ರಯಾಣ ಉಚಿತವಿದ್ದಿದ್ದರಿಂದ ಒಂದಾದ ಮೇಲೊಂದು ಬಸ್‌ನಲ್ಲಿ ಓಡಾಡಿದ್ದೇನೆ. ಸತತ 33 ಗಂಟೆ ಬಸ್‌ಗಳಲ್ಲೇ ಕಳೆದಿರುವುದಾಗಿ ಬಾಲಕಿ ಹೇಳಿದ್ದಾಳೆ.

 

Share Post