ಪಾಕಿಸ್ತಾನದ ಮೀನುಗಾರಿಕಾ ದೋಣಿಯಲ್ಲಿ 200 ಕೋಟಿ ರೂ. ಹೆರಾಯಿನ್ ವಶ
ಅಹಮದಾಬಾದ್; ಗುಜರಾತ್ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದ ಮೀನುಗಾರಿಕಾ ದೋಣಿಯೊಂದರಲ್ಲಿ ಭಾರಿ ಪ್ರಮಾಣದ ಹೆರಾಯಿನ್ ಪತ್ತೆಯಾಗಿದೆ. ಸುಮಾರು 40 ಕೆಜಿ ಹೆರಾಯಿನ್‌ನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಬೆಲೆ ಬರೋಬ್ಬರಿ 200 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಗುಜರಾತ್ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿದೆ. ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈ ವೇಳೆ ಪಾಕಿಸ್ತಾನ ಮೂಲದ ಆರು ಮಂದಿಯನ್ನು ಬಂಧಿಸಲಾಗಿದೆ. ಗುಜರಾತ್ ಕರಾವಳಿಯಲ್ಲಿ ಹೆರಾಯಿನ್ ಇಳಿಸಿ ರಸ್ತೆ ಮಾರ್ಗದ ಮೂಲಕ ಪಂಜಾಬ್‌ಗೆ ಸಾಗಿಸುವ ಇರಾದೆ ಹೊಂದಲಾಗಿತ್ತು.