ವಿಭಜನೆಯಾಗ್ತಿದೆಯಾ ಶಿವಸೇನೆ..?; ಸಂಪರ್ಕಕ್ಕೆ ಸಿಗ್ತಿಲ್ಲ 25 ಶಾಸಕರು..!
ಮುಂಬೈ; ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಪಕ್ಷ ವಿಭಜನೆಯಾಗುವ ಲಕ್ಷಣ ಕಂಡಬರುತ್ತಿದೆ. ಯಾಕಂದ್ರೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತರೆಂದೇ ಹೇಳಲಾಗುವ ಏಕನಾಥ್ ಶಿಂಧೆ ನಿನ್ನೆ ಸಂಜೆಯಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಜೊತೆ 25 ಶಾಸಕರ ಸಶಂಪರ್ಕವೂ ಸಿಗುತ್ತಿಲ್ಲ. ಎಲ್ಲರೂ ಸೂರತ್ನ ಹೋಟೆಲ್ವೊಂದರಲ್ಲಿ ತಂಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರೆಲ್ಲರೂ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಶಿವಸೇನೆಯ ಶಾಸಕರ ಒಂದಷ್ಟು ಗುಂಪು ಬೇರೆಯಾಗಿ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೆಲವು ವರ್ಷಗಳಿಂದ ಸಿಟ್ಟಿಗೆದ್ದಿದ್ದ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಅವರ ಗುಂಪಿನ ಶಾಸಕರು ವಿಧಾನಪರಿಷತ್ ಚುನಾವಣೆ ನಂತರ ಕೈಗೆ ಸಿಗದಂತಾಗಿದ್ದಾರೆ. ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ವದಂತಿ ಹಬ್ಬಿದ ಕೂಡಲೇ ಎಲ್ಲ ಶಾಸಕರ ಸಭೆ ಕರೆಯುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಸೋಮವಾರ ಒಟ್ಟು ಹತ್ತು ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಶಿವಸೇನೆ ತನ್ನ ಎರಡೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಶಿವಸೇನೆ ಕಾಂಗ್ರೆಸ್ ಜೊತೆಯೂ ಒಡಕು ಸೃಷ್ಟಿಸಿಕೊಂಡಿದೆ ಎಂಬ ಮಾತು ಕೇಳಿಬರುತ್ತಿದೆ. ಒಡೆದ ಮತಗಳಿಂದಾಗಿ ಶಿವಸೇನೆ ಇಬ್ಭಾಗವಾಗುತ್ತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.