International

ಇಂದೇ ಗೊಟಬಯ ರಾಜೀನಾಮೆ; ಜುಲೈ 20ಕ್ಕೆ ಶ್ರೀಲಂಕಾಗೆ ನೂತನ ಅಧ್ಯಕ್ಷ

ಕೊಲಂಬೊ; ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದಾರೆ. ಈ ಬಗ್ಗೆ ಶ್ರೀಲಂಕಾ ಸಂಸತ್ತಿನ ಸ್ಪೀಕರ್‌ಗೆ ಕರೆ ಮಾಡಿರುವ ಗೊಟಬಯ ಅವರು, ರಾಜೀನಾಮೆ ಪತ್ರವನ್ನೇ ಇಂದೇ ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರವನ್ನು ಸ್ಪೀಕರ್‌ ಮಹಿಂದ ಯಾಪಾ ಅಬೇವರ್ಧನ ಅವರೇ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಇಂದು ಕುಟುಂಬ ಸಮೇತ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದಾರೆ. ಅಲ್ಲಿಂದಲೇ ಅವರು ಸ್ಪೀಕರ್‌ಗೆ ದೂರವಾಣಿ ಕರೆ ಮಾಡಿದ್ದಾರೆ. ‘ಅಧ್ಯಕ್ಷರು ನನ್ನೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಇಂದು ಸ್ವೀಕರಿಸಲಾಗುವುದು. ಇದನ್ನು ಗೊಟಬಯ ಅವರೇ ಖಚಿತಪಡಿಸಿದ್ದಾರೆ’ ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜುಲೈ 20ರಂದು ನೂತನ ಅಧ್ಯಕ್ಷರ ನೇಮಕ ಮಾಡಲಾಗುವುದು. ನಾವು ರೂಪಿಸಿರುವ ಸಂಸದೀಯ ಪ್ರಕ್ರಿಯೆಯಲ್ಲಿ ವಿಶ್ವಾಸವಿಟ್ಟು ಶಾಂತಿಯುತವಾಗಿರಿ ಎಂದು ಸ್ಪೀಕರ್‌ ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ.

Share Post