ಸಮಾಧಿ ಸ್ಥಿತಿ ತಲುಪಿದ್ದಾರಂತೆ ಬಿಡದಿ ನಿತ್ಯಾನಂದ ಸ್ವಾಮಿ; ಕೈಲಾಸದಿಂದ ಬಂದ ಸಂದೇಶವಾದರೂ ಏನು..?
ಕೋರ್ಟ್‌ನಲ್ಲಿ ಕೇಸ್ ದಾಖಲಾದ ನಂತರ ದೇಶ ಬಿಟ್ಟುಹೋಗಿ ಕೈಲಾಸ ಎಂಬ ಪ್ರತ್ಯೇಕ ದೇಶ ಕಟ್ಟಿಕೊಂಡಿದ್ದೇನೆ ಎಂದು ಹೇಳುತ್ತಿರುವ ಬಿಡದಿಯ ನಿತ್ಯಾನಂದ ಸ್ವಾಮಿ ಈಗ ಸಮಾಧಿ ಸ್ಥಿತಿ ತಲುಪಿದ್ದಾರಂತೆ. ನಿತ್ಯಾನಂದ ಅವರು ತೀರಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ನಿತ್ಯಾನಂದ ಧ್ಯಾನಪೀಠದಿಂದ ಸ್ಪಷ್ಟನೆ ನೀಡಲಾಗಿದೆ. ಜೊತೆಗೆ ನಿತ್ಯಾನಂದ ಏನು ಹೇಳಿದ್ದಾರೆ ಎಂಬ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಕೈಲಾಸ ಪೀಠ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಈ ಸಂಬಂಧ ಪೋಸ್ಟ್ ಹಾಕಲಾಗಿದ್ದು, ಅಲ್ಲಿ ನಿತ್ಯಾನಂದರ ಸಂದೇಶಗಳನ್ನು ಬರೆಯಲಾಗಿದೆ. ನಿತ್ಯಾನಂದ ಕೈ ಬರಹ ಇರುವ ಫೋಟೊ ಸಹ ಇದೆ. ‘ನಾನು ಸದ್ಯ ಸಮಾಧಿ ಸ್ಥಿತಿ ತಲುಪಿದ್ದು, ಮತ್ತೆ 2026ರ ವೇಳೆಗೆ ಲೌಕಿಕ ಜಗತ್ತಿನ ಚಟುವಟಿಕೆಗಳಿಗೆ ಹಿಂತಿರುಗುತ್ತೇನೆ’ ಎಂದು ಅದರಲ್ಲಿ ಬರೆಯಲಾಗಿದೆ. ನಾನು ಈಗಾಗಲೇ ಸತ್ತು ಹೋಗಿದ್ದೇನೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಅದೆಲ್ಲ ಸುಳ್ಳು. ಈಗಲೂ 27 ವೈದ್ಯರ ತಂಡ ನನ್ನನ್ನು ನೋಡಿಕೊಳ್ಳುತ್ತಿದೆ. ಸಮಾಧಿ ಸ್ಥಿತಿಯಲ್ಲಿದ್ದರೂ ನಿತ್ಯ ಶಿವ ಪೂಜೆ ಮಾಡುವುದನ್ನು ಬಿಟ್ಟಿಲ್ಲ. ಆದರೆ ನೀರು–ಆಹಾರ ಸ್ವೀಕರಿಸುತ್ತಿಲ್ಲ ಎಂದೂ ನಿತ್ಯಾನಂದ ಸ್ಪಷ್ಟನೆ ನೀಡಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿರುವ ಅಂಶಗಳು:
1. ನಾನು ಸಮಾಧಿ ಸ್ಥಿತಿಯಲ್ಲಿದ್ದೇನೆ
2. ನಾನು ಸತ್ತುಹೋಗದಿದೇನೆಂದು ವದಂತಿ ಹಬ್ಬಿಸಲಾಗುತ್ತಿದೆ. ಆದರೆ ನಾನು ಸತ್ತಿಲ್ಲ, ನಾನು ಎಲ್ಲೂ ಹೋಗಿಲ್ಲ, ನಾನು ಸಮಾಧಿಯಲ್ಲಿದ್ದೇನೆ
3. ನಾನು ಬಂದು ನಿಮ್ಮ ಜೊತೆ ಮಾತನಾಡುವುದಕ್ಕೆ, ಸತ್ಸಂಗ ಕೊಡುವುದಕ್ಕೆ ಇನ್ನೂ ಸಮಯ ಹಿಡಿಯುತ್ತದೆ
4. ನನ್ನ ಬಗ್ಗೆ ಅನುಮಾನಪಡುವವರು ತಿರುವಣ್ಣಾಮಲೈನಲ್ಲಿರುವ ಅರುಣಾಚಲಗಿರಿ ಯೋಗೀಶ್ವರ ಸಮಾಧಿಗೆ ಹೋಗಿ ದೀಪ ಬೆಳಗಿ, ನನ್ನನ್ನು ನೀವು ಸ್ಪಷ್ಟವಾಗಿ ಕಾಣಬಲ್ಲಿರಿ
5. ನನಗೆ ನೆರವು ನೀಡುತ್ತಿರುವ ಎಲ್ಲಾ ವೈದ್ಯರಿಗೂ ನನ್ನ ಧನ್ಯವಾದಗಳು
6. ನನ್ನನ್ನು 27 ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ಅವರು ವೈದ್ಯರಿಗಿಂತ ಭಕ್ತರಂತೆ, ಸಂಶೋಧಕರಂತೆ ನನ್ನನ್ನು ಅಧ್ಯಯನ ಮಾಡುತ್ತಿದ್ದಾರೆ. ಮಾನವ ದೇಹ ಮತ್ತು ಮನಸ್ಸಿನ ಅತೀಂದ್ರೀಯ ಶಕ್ತಿಯ ಅಧ್ಯಯನ ಮಾಡುತ್ತಿದ್ದಾರೆ.
7. ಪ್ರತಿದಿನ ನನ್ನ ನಿತ್ಯ ಶಿವಪೂಜೆಯಷ್ಟೇ ನಡೆಯುತ್ತಿದೆ. ಆಹಾರ ಸೇವನೆ ಮತ್ತು ನಿದ್ರೆ ಇನ್ನೂ ಶುರುವಾಗಿಲ್ಲ
8. ನಾನು ಕಾಯಿಲೆ ಬಿದ್ದಿಲ್ಲ. ನನ್ನ ದೇಹದಲ್ಲಿ ಕಾಯಿಲೆ ಪತ್ತೆ ಹಚ್ಚಲು ವೈದ್ಯರಿಗೆ ಸಾಧ್ಯವಾಗಿಲ್ಲ
9. ನನ್ನ ಋದಯ 18 ರ ಹುಡುಗನ ಆರೋಗ್ಯಕರ ಹೃದಯದಂತೆ ಕೆಲಸ ಮಾಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ನನ್ನ ಅಂಗಾಂಗಗಳೆಲ್ಲವೂ ಚೆನ್ನಾಗಿವೆ ಎಂದೂ ವೈದ್ಯರು ತಿಳಿಸಿದ್ದಾರೆ.