ಹೆಲ್ತ್‌ಕೇರ್ ಸೆಂಟರ್‌ಗಳ ಮೇಲೆ ರಷ್ಯಾ ಟಾರ್ಗೆಟ್: ಇದುವರೆಗೂ 72 ದಾಳಿ ನಡೆದಿರುವುದಾಗಿ WHOಮಾಹಿತಿ
ಉಕ್ರೇನ್: ಉಕ್ರೇನ್ ಮೇಲಿನ ರಷ್ಯಾ ದ್ವೇಷ ಇನ್ನೂ ಕಡಿಮೆಯಾಗಿಲ್ಲ. ಒಂದು ತಿಂಗಳಿನಿಂದ ಯುದ್ಧ ನಡೆಯುತ್ತಲೇ ಇದೆ. ಕೇವಲ ಸೇನೆ ಮಾತ್ರ ನಮ್ಮ ಗುರಿ ಎಂದಿದ್ದ ರಷ್ಯಾ ನಾಗರೀಕರನ್ನೂ ಗುರಿಯಾಗಿಸಿ ದಾಳಿ ಮಾಡುತ್ತಿದೆ ಅದರ ಭಾಗವಾಗಿ ಹಲವು ಕಟ್ಟಡಗಳು ಹಾಗೂ ಆಸ್ಪತ್ರೆಗಳ ಮೇಲೆ ದಾಳಿ ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಆಸ್ಪತ್ರೆಗಳ ಮೇಲೆ ಪುನರಾವರ್ತಿತ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದೆ. ರಷ್ಯಾ ಪದೇ ಪದೇ ಆರೋಗ್ಯ ಕೇಂದ್ರಗಳ ಮೇಲೆ ದಾಳಿ ನಡೆಸುತ್ತಿದೆ ಇದು ಸರಿಯಲ್ಲ ಎಂಬ ಮಾತನ್ನು ಹೇಳಿದೆ.
ರಷ್ಯಾ ತನ್ನ ಆಕ್ರಮಣದ ಭಾಗವಾಗಿ ಆಸ್ಪತ್ರೆಗಳು, ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳ ಮೇಲೆ ದಾಳಿ ಮಾಡುತ್ತಿದೆ ಎಂದು WHO ಹೇಳಿದೆ. ದಿನದಿಂದ ದಿನಕ್ಕೆ ದಾಳಿಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದೆ. ಫೆಬ್ರವರಿ 24 ರಿಂದ ಉಕ್ರೇನ್‌ನಲ್ಲಿ ಆರೋಗ್ಯ ಕೇಂದ್ರಗಳ ಮೇಲೆ 72 ದಾಳಿಗಳು ನಡೆದಿವೆ ಎಂದು WHO ದೃಢಪಡಿಸಿದೆ. ಈ ಶೀತಲ ಸಮರದಲ್ಲಿ ಕನಿಷ್ಠ 71 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 37 ಜನರು ಗಾಯಗೊಂಡಿದ್ದಾರೆ ಎಂದು ಅಂಕಿ-ಅಂಶಗಳನ್ನು ನೀಡಿದೆ.
ವೈಮಾನಿಕ ದಾಳಿಯಿಂದ ಆಸ್ಪತ್ರೆಗಳು ನಾಶವಾಗಿ, ವೈದ್ಯಕೀಯ ಸಾರಿಗೆ ಮತ್ತು ಸರಬರಾಜು ಮಳಿಗೆಗಳು ಹಾನಿಗೊಳಗಾಗಿವೆ. ಉಕ್ರೇನ್‌ನ ವಕ್ತಾರ ಜರ್ನೋ ಹಬೀಚ್ ಅವರು ಪ್ರತಿದಿನವೂ ಆಸ್ಪತ್ರೆಗಳನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವೈದ್ಯರು, ನರ್ಸ್‌ಗಳು ಸೇರಿದಂತೆ ಆರೋಗ್ಯ ಕೇಂದ್ರಗಳಿಗೆ ಸುರಕ್ಷಿತ ಸ್ಥಳಗಳ ಅಗತ್ಯವಿದೆ ಎಂದು ಅಭಿಪ್ರಾಯವನ್ನು ತಿಳಿಸಿದ್ದಾರೆ.