International

ಅಮೆಜಾನ್‌ ಕಾಡಿನ ಕಟ್ಟ ಕಡೆಯ ಬುಡಕಟ್ಟು ವ್ಯಕ್ತಿ ಸಾವು

ಬ್ರೆಜಿಲ್; ದ. ಅಮೆರಿಕದ ಅಮೆಜಾನ್‌ ಕಾಡಿನ ಕಟ್ಟಕಡೆಯ ಬುಡಕಟ್ಟು ವ್ಯಕ್ತಿ ಮರಣ ಹೊಂದಿರುವುದಾಗಿ ತಿಳಿದು ಬಂದಿದೆ. ರೋಂಡೊನಿಯಾದ ತಾನಾರು ವ್ಯಾಪ್ತಿಯ ಕಾಡಿನಲ್ಲಿ ಕಳೆದ ಆಗಸ್ಟ್ 23 ರಂದು ಮರಣವಾಗಿದ್ದಾನೆಂದು ಬ್ರೆಜಿಲ್‌ನ ಬುಡಕಟ್ಟು ಇಲಾಖೆ (Funai) ತಿಳಿಸಿದೆ. ಮರಣ ಹೊಂದಿದ ವ್ಯಕ್ತಿ 26 ವರ್ಷಗಳಿಂದ ಕಾಡಿನಲ್ಲಿ ಏಕಾಂಗಿಯಾಗಿ ಬದುಕಿದ್ದ. ಈ ವ್ಯಕ್ತಿಯ ಭಾಷೆ, ಹೆಸರು, ಅವನ ಬುಡಕಟ್ಟು ಸಮುದಾಯದವರ ಪೂರ್ವಜರ ಬಗ್ಗೆ ಇದುವರೆಗೆ ಯಾರಿಗೂ ತಿಳಿದು ಬಂದಿಲ್ಲ. ranchers ಎನ್ನುವರು (ಪಶುಸಾಕಾಣೆದಾರರು) 1970 ರಲ್ಲಿ ಹೊರಜಗತ್ತನ್ನೇ ನೋಡದಿದ್ದ ಹಾಗೂ ಕಡಿಮೆ ಸಂಖ್ಯೆಯಲ್ಲಿದ್ದ ಈ ಬುಡಕಟ್ಟು ಸಮುದಾಯದ ಮೇಲೆ ಹತ್ಯಾಕಾಂಡ ನಡೆಸಿ ಬಹುತೇಕ ಜನರನ್ನು ಕೊಂದು ಹಾಕಿದ್ದರು.

ಉಳಿದಿದ್ದ 7 ಜನರಲ್ಲಿ ಆರು ಜನರನ್ನು 1995 ರಲ್ಲಿ ಅಕ್ರಮ ಗಣಿ ನಡೆಸುವವರು ಗುಂಡಿಕ್ಕಿ ಸಾಯಿಸಿದ್ದರು. ಅದರಲ್ಲಿ ಉಳಿದಿದ್ದ ಒಬ್ಬನೇ ಒಬ್ಬ ವ್ಯಕ್ತಿ ಈಗ ಸಹಜವಾಗಿ ಕಾಡಿನಲ್ಲಿ ತನ್ನ ಗುಡಿಸಲು ಎದುರು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ‘ದಿ ಮ್ಯಾನ್ ಆಫ್ ಹೋಲ್’ ಎಂದು ಹೆಸರಾಗಿದ್ದ ಈ ಬುಡಕಟ್ಟು ವ್ಯಕ್ತಿಗೆ 60 ವಯಸ್ಸಾಗಿರಬಹುದು. ಸಹಜವಾಗಿ ಮೃತಪಟ್ಟಿದ್ದಾನೆ ಎಂದು ಇಲಾಖೆ ತಿಳಿಸಿದೆ. ಬುಡಕಟ್ಟು ಇಲಾಖೆ ಈತನ ಇರುವಿಕೆಯನ್ನು ತಿಳಿದು ಅಧ್ಯಯನ ಕೈಗೊಂಡಾಗ ಈತನಿಗೆ ಸಂಬಂಧಿಸಿದಂತೆ ಹಿಂದೆ ಏನೆಲ್ಲಾ ಆಗಿತ್ತು ಎಂದು ವಿಧಿವಿಜ್ಞಾನ ಸಹಾಯದ ಮೂಲಕ ಪತ್ತೆ ಹಚ್ಚಿದ್ದರು. ಡಾಕ್ಯುಮೆಂಟರಿ ಕೂಡ ಮಾಡಿದ್ದರು. ಹೊರಜಗತ್ತಿಗೆ ಕರೆದುಕೊಂಡು ಬರಲು ಮಾಡಿದ ಪ್ರಯತ್ನಗಳು ವಿಫಲವಾದ ನಂತರ ಆತನನ್ನು ಅವನ ಪಾಡಿಗೆ ಬಿಟ್ಟಿದ್ದರು. ಈ ವ್ಯಕ್ತಿ ಪ್ರಾಣಿಗಳನ್ನು ಬಲೆಗೆ ಕೆಡವಲು ತನ್ನ ಪ್ರದೇಶದಲ್ಲಿ ವಿಶಿಷ್ಠ ರಂದ್ರಗಳನ್ನು ಮಾಡುತ್ತಿದ್ದ ಎನ್ನುವುದು ತಿಳಿದು ಬಂದಿತ್ತು. ಹೀಗಾಗಿ ಆತನಿಗೆ ‘ದಿ ಮ್ಯಾನ್ ಆಫ್ ಹೋಲ್’ ಎಂದು ಹೆಸರು ಬಂದಿತ್ತು.

Share Post