CrimeInternational

ಪಾಕಿಸ್ತಾನದಲ್ಲಿ ಚುನಾವಣೆಗೆ ಮೊದಲೇ ಶುರುವಾಯ್ತು ದುಷ್ಕೃತ್ಯ; ಉಗ್ರರ ದಾಳಿ 10 ಪೊಲೀಸರು ಬಲಿ!

ಕರಾಚಿ; ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಎಲ್ಲಾ ಪಕ್ಷಗಳೂ ಚುನಾವಣೆಗೆ ತಯಾರಾಗುತ್ತಿವೆ. ಫೆಬ್ರವರಿ 8ರಂದು ಚುನಾವಣೆ ನಡೆಯಲಿದೆ. ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿವೆ. ಉಗ್ರರು ಪೊಲೀಸ್‌ ಠಾಣೆ ಮೇಲೆಯೇ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ 10 ಪೊಲೀಸರು ಸಾವನ್ನಪ್ಪಿದರೆ, ಆರು ಮಂದಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ ಈ ದುರ್ಘಟನೆ ನಡೆದಿದೆ. ಪಾಕಿಸ್ತಾನದ ದೇರಾ ಇಸ್ಮಾಯಿಲ್ ಖಾನ್‌ನಲ್ಲಿರುವ ಚೋಡ್ವಾನ್ ಪೊಲೀಸ್ ಠಾಣೆಯಲ್ಲಿ ಈ ಕೃತ್ಯ ಎಸಗಲಾಗಿದೆ.

ಉಗ್ರರು ಹ್ಯಾಂಡ್‌ ಗ್ರನೇಡ್‌ ಬಳಸಿ ಈ ದಾಳಿ ನಡೆಸಲಾಗಿದೆ. ಚುನಾವಣೆಗೆ ಮೂರು ದಿನಗಳಿದ್ದಾಗ ಈ ದಾಳಿ ನಡೆದಿದ್ದು, ಇದರ ಹಿಂದೆ ಯಾರಿದ್ದಾರೆ ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ.  ಪಾಕಿಸ್ತಾನದಲ್ಲಿ ಮತದಾನಕ್ಕೆ ತಯಾರಿ ನಡೆಯುತ್ತಿರುವಾಗಲೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ಪಾಕಿಸ್ತಾನದ ಜನಕ್ಕೆ ಇದೇನೋ ಮೊದಲೂ ಅಲ್ಲ, ಕೊನೆಯೂ ಅಲ್ಲ. ಬಾಂಬ್‌ಗಳು, ಗ್ರನೇಡ್‌ ಪಟಾಕಿಗಳಂತೆ ಸಿಡಿಯುತ್ತಿರುತ್ತವೆ. ಭಯೋತ್ಪಾದಕ ಕೃತ್ಯಗಳು ಯಾವಾಗಲೂ ಇಲ್ಲಿ ಇದ್ದೇ ಇರುತ್ತವೆ. ಅದರಲ್ಲೂ ಚುನಾವಣೆಗಳು ಎದುರಾದಾಗ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ.

ಈ ಬಾರಿ ಭಯೋತ್ಪಾದಕರು ಪೊಲೀಸರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಹತ್ತು ಪೊಲೀಸ್‌ ಅಧಿಕಾರಿಗಳು ಇದರಲ್ಲಿ ಸಾವನ್ನಪ್ಪಿದ್ದಾರೆ. 6 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

 

Share Post