International

ಸೇನೆ ಬಗ್ಗೆ ತಪ್ಪು ಮಾಹಿತಿ ರವಾನಿಸಿದ್ರೆ 15ವರ್ಷಗಳು ಜೈಲು ಶಿಕ್ಷೆ-ರಷ್ಯಾ ಹೊಸ ಕಾನೂನು

ರಷ್ಯಾ: ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧ ಮುಂದುವರೆದಿದೆ. ರಷ್ಯಾ ಪಡೆಗಳು ಸತತ ಒಂಭತ್ತನೇ ದಿನವೂ ಉಕ್ರೇನ್ ಮೇಲೆ ಬಾಂಬ್ ದಾಳಿ ನಡೆಸುತ್ತಿವೆ. ಉಕ್ರೇನ್ ಕೂಡ ಹಿಂದೆ ಸರಿಯದೆ ಶತ್ರು ಸೈನಿಕರಿಗೆ ಬೆವರಿಳಿಸುತ್ತಿದೆ. ಏತನ್ಮಧ್ಯೆ, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ, ಆ ದೇಶಗಳಲ್ಲಿ ಹೊಸ ಕಾನೂನುಗಳ ಅನುಷ್ಠಾನಕ್ಕೆ ಕಾರಣವಾಯಿತು. ರಷ್ಯಾದ ದಾಳಿಗೆ ಪ್ರತೀಕಾರವಾಗಿ ಅವರ ತಾಯ್ನಾಡಿನಲ್ಲಿ ನೆಲೆಸಿರುವ ರಷ್ಯನ್ನರ ಆಸ್ತಿಯನ್ನು ವಶಪಡಿಸಿಕೊಳ್ಳಲು ಉಕ್ರೇನ್ ಗುರುವಾರ ಪ್ರಮುಖ ಕಾನೂನನ್ನು ಅಂಗೀಕರಿಸಿದ. ಇದೀಗ ರಷ್ಯಾ ಕೂಡ ಅಂತಹ ಒಂದು ಕಾನೂನನ್ನು ತಂದಿದೆ.

ಸೇನೆಯ ಬಗ್ಗೆ ಸುಳ್ಳು ಪ್ರಚಾರ ಮಾಡುವವರನ್ನು ಹತ್ತಿಕ್ಕುವ ಕಾನೂನಿಗೆ ರಷ್ಯಾದ ಸಂಸತ್ತು ಶುಕ್ರವಾರ ಅನುಮೋದನೆ ನೀಡಿದೆ. ಕಾಯಿದೆಯಡಿಯಲ್ಲಿ, ರಷ್ಯಾದ ಮಿಲಿಟರಿಯ ವಿರುದ್ಧ ಸುಳ್ಳು ಪ್ರಚಾರವನ್ನು ಹರಡುವ ಕೆಲಸ ಮಾಡಿದ್ರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸೂಚಿಸಿದೆ.  ರಷ್ಯಾದ ಸೇನೆಯ ವಿರುದ್ಧ ಉದ್ದೇಶಪೂರ್ವಕವಾಗಿ ಸುಳ್ಳು ಪ್ರಚಾರವನ್ನು ಹರಡುವವರಿಗೆ 15 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ತೆರಬೇಕಾಗುತ್ತದೆ ಎಂದು ರಷ್ಯಾ ಸೂಚಿಸಿದೆ.  ರಷ್ಯಾದ ಸಂಸತ್ತಿನ ಕೆಳಮನೆಯು ಕೂಡಾ ಈ ಮಸೂದೆಯನ್ನು ಅಂಗೀಕರಿಸಿದೆ.

Share Post