History

ರಾಜ್ಯದಲ್ಲಿ 6 ಕೋಟಿ ಕೊವಿಡ್‌ ಪರೀಕ್ಷೆ; ರಾಜ್ಯ ನಂಬರ್‌ 3

ಬೆಂಗಳೂರು: ಕರ್ನಾಟಕದಲ್ಲಿ ಇಂದಿಗೆ ಒಟ್ಟು 6 ಕೋಟಿ ಕೊವಿಡ್‌ ಟೆಸ್ಟ್‌ ಮಾಡಲಾಗಿದೆ. ಕೊವಿಡ್‌ ಟೆಸ್ಟ್‌ಗಳನ್ನು ಕಾಲಕಾಲಕ್ಕೆ ಮಾಡಿ, ಕೊರೊನಾ ನಿಯಂತ್ರಣಕ್ಕೆ ಯತ್ನಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಕೋವಿಡ್ ಆರಂಭವಾದಾಗ ರಾಜ್ಯದಲ್ಲಿ ಎನ್‍ಐವಿ ಘಟಕದಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಆಗ ಖಚಿತತೆಗಾಗಿ ಪುಣೆಯ ಎನ್‍ಐವಿ ಘಟಕಕ್ಕೆ ಮಾದರಿಗಳನ್ನು ಕಳುಹಿಸಲಾಗುತ್ತಿತ್ತು. ನಂತರ ಹಂತಹಂತವಾಗಿ ಹೊಸ ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳನ್ನು ಆರಂಭಿಸಲಾಯಿತು. ಸದ್ಯ ರಾಜ್ಯದಲ್ಲಿ 99 ಸರ್ಕಾರಿ ಹಾಗೂ 169 ಖಾಸಗಿ ಸೇರಿ ಒಟ್ಟು 268 ಲ್ಯಾಬ್ ಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಈವರೆಗೆ 1,14,12,162 ರಾಪಿಡ್ ಆಂಟಿಜೆನ್, 4,87,02,653 ಆರ್ ಟಿಪಿಸಿಆರ್ ಹಾಗೂ ಇತರೆ ವಿಧಾನಗಳು ಸೇರಿ ಒಟ್ಟು 6,01,14,815 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. 2020ರಲ್ಲಿ ಒಟ್ಟು 1,41,96,065, 2021ರಲ್ಲಿ 4,23,91,357 ಹಾಗೂ 2022ರಲ್ಲಿ ಈವರೆಗೆ 35,27,393 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಚಿವ ಸುಧಾಕರ್‌ ತಿಳಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಉತ್ತಮ ಪರೀಕ್ಷಾ ವ್ಯವಸ್ಥೆ ಕೂಡ ಕಾರಣ. ಆರಂಭದಿಂದಲೂ ಕರ್ನಾಟಕ ಪರೀಕ್ಷಾ ವ್ಯವಸ್ಥೆಯಲ್ಲಿ ಮುಂದಿದ್ದು, ಉತ್ತಮ ಪರೀಕ್ಷೆ ಹಾಗೂ ಟ್ರ್ಯಾಕಿಂಗ್ ವಿಧಾನ ಅಳವಡಿಸಿಕೊಂಡಿದೆ. ಈಗ 6 ಕೋಟಿ ಪರೀಕ್ಷೆಗಳ ಮೂಲಕ ಕೋವಿಡ್ ಹೋರಾಟದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ಹೆಚ್ಚು ಕೋವಿಡ್ ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ರಾಜ್ಯವು ಇಡೀ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲಾ ಜಿಲ್ಲಾಡಳಿತ ಹಾಗೂ ಆರೋಗ್ಯ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಸುಧಾಕರ್‌ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Share Post