ಕೊರೊನಾ ಸೋಂಕು ಇಳಿಮುಖ:ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಕ್ಯಾನ್ಸಲ್
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ನಿಧಾನವಾಗಿ ಕಡಿಮೆಯಾಗುತ್ತಿದೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಗುರುವಾರ ಮಧ್ಯಾಹ್ನ ಸಭೆ ನಡೆಸಿ, ವಾರಾಂತ್ಯ ನಿಷೇಧಾಜ್ಞೆಯನ್ನು ತೆಗೆದುಹಾಕಲಾಗಿದೆ. ಸಭೆಯಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮತ್ತು ತಜ್ಞರ ಉಪಸ್ಥಿತಿಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕೊರೊನಾ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ತೆಗೆದುಹಾಕಲಾಗಿದೆ. ಚಿತ್ರಮಂದಿರಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸರ್ಕಾರಿ ಕಚೇರಿಗಳು ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶಿಸಿದೆ. ಬೀದಿ ವ್ಯಾಪಾರ ವಿಚಾರದಲ್ಲೂ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ಇಲ್ಲಿಯವರೆಗೆ ಜಾರಿಯಲ್ಲಿದ್ದ ಸರಿ-ಬೆಸ ನೀತಿಯನ್ನು ಹಿಂಪಡೆದಿದ್ದಾರೆ. ಮದುವೆ ಮತ್ತು ಹಬ್ಬಗಳಿಗೆ 200 ಜನರಿಗೆ ಅವಕಾಶ ನೀಡಲಾಗಿದೆ. ಶಾಲೆಗಳ ಪುನರಾರಂಭದ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.