BengaluruHealth

ನವೆಂಬರ್‌ 30 ರಾಜ್ಯದ ಎಲ್ಲಾ ಡಯಾಲಿಸಿಸ್‌ ಕೇಂದ್ರಗಳೂ ಬಂದ್‌

ಬೆಂಗಳೂರು; ನವೆಂಬರ್‌ 30ರಂದು ರಾಜ್ಯದ ಎಲ್ಲಾ 202 ಡಯಾಲಿಸಿಸ್‌ ಕೇಂದ್ರಗಳನ್ನು ಬಂದ್‌ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಲಾಗಿದೆ. ವೇತನ ಸಮಸ್ಯೆ ಹಿನ್ನೆಲೆಯಲ್ಲಿ ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿ, ನವೆಂಬರ್‌ 30 ರಂದು ಡಯಾಲಿಸಿಸ್‌ ಕೇಂದ್ರಗಳನ್ನು ಮುಚ್ಚಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಹೀಗಾಗಿ ಸರ್ಕಾರವೇನಾದರೂ ಮುನ್ನೆಚ್ಚರಿಕೆ ವಹಿಸಿ, ಸಿಬ್ಬಂದಿಯ ಮನವೊಲಿಸದೇ ಹೋದರೆ, ನವೆಂಬರ್‌ 30ರಂದು ರೋಗಿಗಳು ಪರದಾಡಬೇಕಾದ ಪರಿಸ್ಥಿತಿ ಬರಬಹುದು.

ಕೊರೊನಾ ಹಿನ್ನೆಲೆಯಲ್ಲಿ ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿಗೆ ಸಂಬಳದಲ್ಲಿ ಕಡಿತ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಅವರು ಕೇವಲ ಅರ್ಧ ಸಂಬಳವನ್ನಷ್ಟೇ ಪಡೆಯುತ್ತಿದ್ದಾರೆ. ಇದು ಜೀವನಕ್ಕೆ ಸಾಕಾಗುತ್ತಿಲ್ಲ ಅನ್ನೋದು ಸಿಬ್ಬಂದಿಯ ಆರೋಪ. ಇದಲ್ಲದೆ ಕಳೆದ ಎರಡೂವರೆ ತಿಂಗಳಿಂದ ಕೊಡುತ್ತಿದ್ದ ಅರ್ಧ ಸಂಬಳವೂ ಸಿಗುತ್ತಿಲ್ಲವಂತೆ.

ಈ ಹಿಂದೆ 45 ಕೇಂದ್ರ​​ಗಳ ಜವಬ್ದಾರಿ ಹೊತ್ತಿದ್ದ ESKAG ಸಂಜೀವಿನಿಗೆ ಈಗ 202 ಕೇಂದ್ರ​​ಗಳ ಜವಾಬ್ದಾರಿ ನೀಡಲಾಗಿದೆ. ಈ ಡಯಾಲಿಸಿಸ್​ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 650 ಸಿಬ್ಬಂದಿಯ ಸಂಬಳದ ಬಗ್ಗೆ ಸರ್ಕಾರ ಅಸಡ್ಡೆ ತೋರಿದೆ. ವೇತನ ಸಿಗದೇ, ಪಿಎಫ್, ಇಎಸ್ಐ ಇಲ್ಲದೇ 650 ಸಿಬ್ಬಂದಿ ಪರದಾಡುತ್ತಿದ್ದಾರೆ.

 

Share Post