ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ; ನಾಳೆ ಸಿಎಂ ಜೊತೆ ಮಹತ್ವದ ಸಭೆ!
ಬೆಂಗಳೂರು; ಹೊಸ ತಳಿಯ ಕೊರೊನಾ ಬಂದ ಮೇಲೆ ರಾಜ್ಯದಲ್ಲಿ ಮೊದಲ ಬಲಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಐದು ದಿನಗಳ ಹಿಂದೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕೊರೊನಾಗೆ ಬಲಿಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಖಚಿತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಚಾಮರಾಜಪೇಟೆಯ 64 ವರ್ಷದ ವ್ಯಕ್ತಿ ಕೊರೊನಾ ಜೊತೆಗೆ ಟಿಬಿ, ಬಿಪಿ, ಶ್ವಾಸಕೋಶ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಎಲ್ಲಾ ಕಾಯಿಲೆಗಳ ನಡುವೆ ಕೊರೊನಾ ಸೋಂಕು ಕೂಡಾ ತಗುಲಿದ್ದು, ಐದು ದಿನಗಳ ಹಿಂದೆ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಈ ಕೊರೊನಾ ಉಪತಳಿ ಕಾಣಿಸಿಕೊಂಡಿದೆ. ಇದು ವೇಗವಾಗಿ ಹರಡುವ ವೈರಾಣಾಗಿದ್ದರೂ, ಇದು ಹೆಚ್ಚು ಹಾನಿಕಾರಿಯಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ನಾಳೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಹತ್ವದ ಸಭೆ ನಡೆಸಲಾಗುತ್ತದೆ. ಹೆಚ್ಚು ಜನಜಂಗುಳಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.