ಹಿರಿಯ ಚಿತ್ರನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ; ಚಿಕಿತ್ಸೆ
ಬೆಂಗಳೂರು: ಸ್ಯಾಂಡಲ್‌ವುಡ್ ಹಿರಿಯ ನಟ ಶಿವರಾಂ (84) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸೀತಾ ಸರ್ಕಲ್ ಸಮೀಪದ ಪ್ರಶಾಂತ್ ಆಸ್ಪತ್ರೆಯಲ್ಲಿ ಅವರಿಗೆ ಚಕಿತ್ಸೆ ನೀಡಲಾಗುತ್ತಿದೆ. ಶಿವರಾಂ ಅವರ ಮೆದುಳಿಗೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಜೀವರಕ್ಷಕ ಯಂತ್ರದ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಶಿವರಾಂ ಅವರು ಹಲವು ದಶಕಗಳಿಂದ ಕನ್ನಡದಲ್ಲಿ ನಟಿಸುತ್ತಿದ್ದು, ನೂರಾರು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಕೆ.ಆರ್.ರಸ್ತೆಯ ಬಳಿ ಕಾರು ಅಪಘಾತ ಸಂಭವಿಸಿತ್ತು. ಅದಾದ ನಂತರ ಆಘಾತಕ್ಕೊಳಗಾಗಿದ್ದ ಶಿವರಾಂ, ಬನಶಂಕರಿಯ ತಮ್ಮ ನಿವಾಸದ ಕೊಠಡಿ ಸೇರಿ ಏಕಾಂತದಲ್ಲಿದ್ದರು. ಜೊತೆಗೆ ಕೊಠಡಿಯ ಒಳ ಭಾಗದಲ್ಲಿ ಬೀಗ ಹಾಕಿಕೊಂಡಿದ್ದರು. ಅವರು ಬೀಗ ತೆಗೆಯದೇ ಇದ್ದಾಗ, ಕುಟುಂಬದ ಸದಸ್ಯರು ನಕಲಿ ಕೀಲಿ ಬಳಸಿ ಬೀಗ ತೆರೆದು ನೋಡಿದ್ದದಾರೆ. ಈ ವೇಳೆ ಶಿವರಾಂ ಕುಸಿದುಬಿದ್ದ ಸ್ಥಿತಿಯಲ್ಲಿದ್ದು, ತಲೆಗೆ ಏಟಾಗಿ, ಮೂಗಿನಿಂದ ರಕ್ತ ಸೋರುತ್ತಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ.