ಮಕ್ಕಳು ದೂರ ಇಟ್ಟಿದ್ದಕ್ಕೆ ವೃದ್ಧೆಗೆ ಕೋಪ; 23 ಕೋಟಿ ಆಸ್ತಿಯನ್ನು ಸಾಕು ಪ್ರಾಣಿಗಳ ಹೆಸರಿಗೆ ಬರೆದ ಮಹಿಳೆ!
ಮಕ್ಕಳು ಸುಖವಾಗಿರಲಿ, ವೃದ್ಧಾಪ್ಯದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂದು ಪೋಷಕರು, ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾರೆ. ಅವರಿಗಾಗಿ ಆಸ್ತಿಪಾಸ್ತಿಯನ್ನೂ ಮಾಡುತ್ತಾರೆ. ಆದ್ರೆ ಬೆಳೆದು ದೊಡ್ಡವರಾದ ಮಕ್ಕಳು, ವೃದ್ಧ-ತಂದೆ ತಾಯಿಗಳನ್ನು ನೋಡಿಕೊಳ್ಳುವುದಿಲ್ಲ. ಎಷ್ಟೇ ಆಸ್ತಿ, ಅಂತಸ್ತು ಇದ್ದರೂ ಹೆತ್ತವರನ್ನು ವೃದ್ದಾಶ್ರಮಕ್ಕೆ ಬಿಟ್ಟು ಬರ್ತಾರೆ. ಇದೇ ರೀತಿ ಚೀನಾದಲ್ಲಿ ತನ್ನನ್ನು ನೋಡಿಕೊಳ್ಳದ ಮೂವರು ಮಕ್ಕಳಿಗೆ ವೃದ್ಧ ಮಹಿಳೆಯೊಬ್ಬರು ಶಾಕ್ ನೀಡಿದ್ದಾರೆ. ತನ್ನೆಲ್ಲಾ ಆಸ್ತಿಯನ್ನು ತನ್ನ ಸಾಕುಪ್ರಾಣಿಗಳ ಹೆಸರಿಗೆ ಬರೆದುಬಿಟ್ಟಿದ್ದಾರೆ.
ಚೀನಾದ ಶಾಂಘೈ ಬಳಿ ವಾಸವಿರುವ ಲಿ ಎಂಬ ವೃದ್ಧೆ ತನ್ನ 20 ಮಿಲಿಯನ್ ಯುವಾನ್, ಅಂದರೆ ಸುಮಾರು 23.58 ಕೋಟಿ ರೂಪಾಯಿಯ ಆಸ್ತಿಯನ್ನು ತನ್ನ ಸಾಕುಪ್ರಾಣಿಗಳ ಹೆಸರಿಗೆ ಬರೆದಿದ್ದಾಳೆ. ಇದಕ್ಕೆ ಕಾರಣ ಮಕ್ಕಳು ಸರಿಯಾಗಿ ನೋಡಿಕೊಳ್ಳದೇ ಇದ್ದದ್ದು. ಕೆಲವು ವರ್ಷಗಳ ಹಿಂದೆ ಈ ವೃದ್ಧೆ ತನ್ನ ಮೂವರ ಮಕ್ಕಳಿಗೆ ಆಸ್ತಿಯ ಹುಲಿಯು ಬರೆದಿದ್ದಳು. ಆದ್ರೆ ಅನಂತರ ವೃದ್ಧೆ ಅನಾರೋಗ್ಯಕ್ಕೀಡಾಗಿದ್ದು, ಈ ವೇಳೆ ಯಾವ ಮಕ್ಕಳೂ ನೋಡಿಕೊಳ್ಳಲು ಬಂದಿಲ್ಲ. ಆಕೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಲ್ಲಿ ಆಕ್ರೋಶಗೊಂಡ ವೃದ್ಧೆ ವಕೀಲರೊಬ್ಬರನ್ನು ಮನೆಗೆ ಕರೆಸಿಕೊಂಡಿದ್ದಾರೆ. ಆಸ್ತಿಯನ್ನು ಸಾಕು ಪ್ರಾಣಿಗಳ ಹೆಸರಿಗೆ ಬರೆಯಬಹುದೇ, ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯೇ ಎಂದು ಕೇಳಿದ್ದಾರೆ. ವಕೀಲರು ಅಧ್ಯಯನ ಮಾಡಿ, ಆಸ್ತಿಯನ್ನು ಪ್ರಾಣಿಗಳ ಹೆಸರಿಗೆ ಬರೆಯುವುದಕ್ಕೆ ಕಾನೂನಿನಡಿಯಲ್ಲಿ ಅವಕಾಶವಿದೆ ಎಂಬುದನ್ನು ಹೇಳಿದ್ದಾರೆ. ಕೂಡಲೇ ಆ ಮಹಿಳೆ, ತನ್ನ ಎಲ್ಲಾ ಆಸ್ತಿಯನ್ನು ತನ್ನ ಸಾಕುನಾಯಿಗಳು ಹಾಗೂ ಬೆಕ್ಕುಗಳ ಹೆಸರಿಗೆ ಬರುವಂತೆ ಮಾಡಿದ್ದಾಳೆ.
ಜೊತೆಗೆ ಆ ವೃದ್ಧೆ ತನ್ನ ಪ್ರೀತಿಯ ಸಾಕುಪ್ರಾಣಿಗಳ ಆರೈಕೆಯನ್ನು ಆ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಒಪ್ಪಿಸಿದಳು.