ಹೊಸ ವರ್ಷಕ್ಕೆ ಮೈಸೂರಿನಲ್ಲಿ 2 ಲಕ್ಷ ಲಡ್ಡು ತಯಾರಿ
ಮೈಸೂರು; ಅರಮನೆ ನಗರಿ ಮೈಸೂರು ನೂತನ ವರ್ಷಕ್ಕೆ ಸಜ್ಜಾಗುತ್ತಿದೆ. ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಮೊದಲ ದಿನ ಭಕ್ತರಿಗೆ ವಿತರಿಸಲು ಬರೋಬ್ಬರಿ 2 ಲಕ್ಷ ತಿರುಪತಿ ಮಾದರಿಯ ಲಡ್ಡುಗಳನ್ನು ತಯಾರಿಸುವ ಕೆಲಸ ಸಾಗಿದೆ. ಮೈಸೂರಿನ ವಿಜಯನಗರದಲ್ಲಿರುವ ಯೋಗಾನರಸಿಂಹಸ್ವಾಮಿ ದೇಗುಲ ಸುದರ್ಶನ ನರಸಿಂಹ ಕ್ಷೇತ್ರವೆಂದೇ ಹೆಸರುವಾಸಿ. 1994 ರಿಂದಲೂ ವರ್ಷದ ಮೊದಲ ದಿನ ಒಂದು ಸಾವಿರ ಲಡ್ಡುಗಳನ್ನು ವಿತರಿಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಲಡ್ಡುಗಳನ್ನು ವಿತರಿಸುವ ಮೂಲಕ ನೂತನ ವರ್ಷವನ್ನು ಬರ ಮಾಡಿಕೊಳ್ಳಲಾಗಿತ್ತು.
ಈ ಬಾರಿ ಎರಡು ಲಕ್ಷ ಲಡ್ಡುಗಳನ್ನು ವಿತರಿಸಲು ತಯಾರಿ ನಡೆಯುತ್ತಿದ್ದು, ಡಿಸೆಂಬರ್ 31ಕ್ಕೆ ಲಡ್ಡುಗಳ ತಯಾರಿ ಅಂತ್ಯಗೊಳ್ಳಲಿದೆ. ನುರಿತ ಬಾಣಸಿಗರು ಲಡ್ಡುಗಳನ್ನು ತಯಾರಿಸುತ್ತಿದ್ದಾರೆ. ಲಡ್ಡುಗಳಿಗಾಗಿ 50 ಕ್ವಿಂಟಾಲ್ ಕಡಲೆ ಹಿಟ್ಟು, 100 ಕ್ವಿಂಟಾಲ್ ಸಕ್ಕರೆ, 4,000 ಲೀಟರ್ ಎಣ್ಣೆ, 200 ಕೆ.ಜಿ ಗೋಡಂಬಿ, 200 ಕೆ.ಜಿ ಒಣದ್ರಾಕ್ಷಿ, 100 ಕೆ.ಜಿ ಬಾದಾಮಿ, 200 ಕೆ.ಜಿ ಡೈಮಂಡ್ ಸಕ್ಕರೆ, 500 ಕೆ.ಜಿ ಬೂರಾ ಸಕ್ಕರೆ, 10 ಕೆ.ಜಿ ಪಿಸ್ತಾ, 20 ಕೆ.ಜಿ ಏಲಕ್ಕಿ, 20 ಕೆ.ಜಿ ಜಾಕಾಯಿ ಮತ್ತು ಜಾಪತ್ತೆ, 5 ಕೆ.ಜಿ ಕರ್ಪೂರ, 100 ಕೆ.ಜಿ ಲವಂಗ ಬಳಸಲಾಗಿರುವುದಾಗಿ ಯೋಗನರಸಿಂಹಸ್ವಾಮಿ ದೇಗುಲದ ಸಂಸ್ಥಾಪಕ ಶ್ರೀ ಭಾಷ್ಯಂ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.