ಮತಾಂತರ ನಿಷೇಧ ಕಾಯ್ದೆ; ಕಲಾಪದಲ್ಲಿ ವಿಪಕ್ಷಗಳ ಗದ್ದಲ-ಕೋಲಾಹಲ
ಬೆಳಗಾವಿ: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021 ಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಕೋಲಾಹಲ ಉಂಟಾಗಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಕ್ಕೆ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಈ ನಡುವೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವೇಳೆಯಲ್ಲೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಪ್ರಯತ್ನ ನಡೆದಿತ್ತು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಚಿವ ಆರ್.ಅಶೋಕ್, ಕಾಂಗ್ರೆಸ್ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಹಿಟ್ ವಿಕೆಟ್ ಎಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದಾರೆ. ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಇಲ್ಲವೆ ರಾಜೀನಾಮೆ ನೀಡಬೇಕು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಮ್ಮ ಕಾಲದಲ್ಲಿ ಮತಾಂತರ ಬಿಲ್ ಪಾಸ್ ಆಗಿರಲಿಲ್ಲ. ಸುಮ್ಮನೆ ನಮ್ಮ ವಿರುದ್ಧ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಕೆಂಡಾಮಂಡಲವಾಗಿದ್ದಾರೆ.