ಸಿದ್ದಾಪುರದ ಬಳಿ ವಿದ್ಯುತ್ ತಂತಿ ಸ್ಪರ್ಶ; ಎರಡು ಕಾಡಾನೆ ಸಾವು
ಮಡಿಕೇರಿ; ಸಿದ್ದಾಪುರದ ಬಳಿಯ ನೆಲ್ಯಹುದಿಕೇರಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವನ್ನಪ್ಪಿವೆ. ಕಳೆದ ರಾತ್ರಿ ಆಹಾರ ಅರಸಿ ಬಂದಿದ್ದ ಆನೆಗಳಿಗೆ ವಿದ್ಯುತ್ ತಂತಿ ತಗುಲಿದೆ. ಇದರಿಂದಾಗಿ ಎರಡು ಕಾಡಾನೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ನೆಲ್ಯಹುದಿಕೇರಿ ಗ್ರಾಮದ ಕೋಣೇರಿರ ಪ್ರಕಾಶ್ ಹಾಗೂ ಸುಮನ್ ಚಂಗಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಎರಡು ಕಾಡಾನೆಗಳು ಸಾವನ್ನಪ್ಪಿವೆ. ಈ ಜಮೀನಿನಲ್ಲಿ 11 ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿಗಳು ಹಾದುಹೋಗಿವೆ. ವಿದ್ಯುತ್ ತಂತಿ ಮೇಲೆ ಮರದ ಕೊಂಬೆ ಬಿದ್ದಿದ್ದರಿಂದ ತಂತಿ ಕೆಳಕ್ಕೆ ಬಂದಿತ್ತು. ತೋಟದಲ್ಲಿ ಕಾಡಾನೆಗಳು ಹಾದು ಹೋಗುವಾಗ ವಿದ್ಯುತ್ ಸ್ಪರ್ಶ ಆಗಿದೆ. ಇದರಿಂದಾಗಿ ಗಂಡು ಕಾಡಾನೆ ಹಾಗೂ ಒಂದು ಹೆಣ್ಣಾನೆ ಸ್ಥಳದಲ್ಲೇ ಸಾವನ್ನಪ್ಪಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.