ನಿಲ್ಲುತ್ತಿಲ್ಲ ಮಳೆಯ ಅವಾಂತರ; ಧರೆಗುರುಳಿದ ಕಂಬ, ಮರಗಳು; ಕೆಆರ್‌ಎಸ್ ತುಂಬಲು 1 ಟಿಎಂಸಿ ಬೇಕು..!
ಬೆಂಗಳೂರು; ರಾಜ್ಯದಲ್ಲಿ ಮಳೆ ಅವಾಂತರ ಕಡಿಮೆಯಾಗುತ್ತಿಲ್ಲ.. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದೆ.. ಇದರಿಂದಾಗಿ ನಾಡಿನ ಅಣೆಕಟ್ಟೆಗಳು ತುಂಬಿ ತುಳುಕುತ್ತಿವೆ. ಕೆಆರ್‌ಎಸ್ ಡ್ಯಾಂ ಭರ್ತಿಯಾಗಲು ಇನ್ನು ಒಂದು ಟಿಎಂಸಿ ನೀರು ಅಷ್ಟೇ ಬಾಕಿ ಇದೆ. ಹೊಸಪೇಟೆಯ ತುಂಗಭದ್ರಾ ಡ್ಯಾಂ ತುಂಬಿದ್ದು, ಅಣೆಕಟ್ಟೆಯಿಂದ 1.18 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಇನ್ನು ಕೊಡಗಿನಲ್ಲಿ ರಾತ್ರಿಯಿಡೀ ಭಾರಿ ಗಾಳಿ ಸಮೇತ ಮಳೆ ಸುರಿದಿದೆ. ಭಾರೀ ಗಾಳಿಗೆ ಕೊಡಗಿನ ಜನ ತತ್ತರಿಸಿಹೋಗಿದ್ದಾರೆ. ಕೊಡಗು ಜಿಲ್ಲೆಯ ಹಲವು ರಸ್ತೆಗಳ ಮಧ್ಯೆ ಮರಗಳು, ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಶಾಲಾ-ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುವಂತಾಗಿವೆ. ಇನ್ನೊಂದೆಡೆ ಭಾಗಮಂಡಲ, ಮಡಿಕೇರಿ, ಸೋಮವಾರ ಪೇಟೆ ಮುಂತಾದ ಕಡೆ ವಿದ್ಯುತ್ ಸರಬರಾಜು ಕಡಿಮತಗೊಂಡಿದೆ.
ಭಾಗಮಂಡಲ- ತಲಕಾವೇರಿ ರಸ್ತೆ, ಮಡಿಕೇರಿ- ಸೋಮವಾರಪೇಟೆ ರಸ್ತೆ, ಮಡಿಕೇರಿ ನಗರದ ಗಾಳಿಬೀಡು ಜಂಕ್ಷನ್ ಹಾಗೂ ಶನಿವಾರಸಂತೆ ಹೋಬಳಿಯ ಬಹುತೇಕ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳೂ ಧರೆಗುರುಳಿದಿವೆ. ಮಾದಾಪುರದ ಚೆನ್ನಬಸವೇಶ್ವರ ಶಾಲೆಯ ಮೇಲೆ ಮರವೊಂದು ಉರುಳಿದೆ. ಸೋಮವಾರಪೇಟೆ ತಾಲ್ಲೂಕಿನ ಶಿರಂಗಾಲ ಗ್ರಾಮದ ಧರ್ಮರಾಯ ಎಂಬುವವರ ಮನೆಯ ಮೇಲೆ ಮರ ಬಿದ್ದಿದ್ದು, ಮನೆಯ ಯಜಮಾನ ಧರ್ಮರಾಯ ಗಾಯಗೊಂಡಿದ್ದಾರೆ.