ಯಾಮಾರಿದರೆ ಬೀದಿಪಾಲು ಮಾಡ್ತಾಳೆ ಈ ಸೆಕ್ಸಿ ಗೀತಾ..!
ಬೆಂಗಳೂರು; ಯಾರದೋ ಫೋಟೋ.. ಏನೋ ಹೆಸರು.. ಆದರೂ ಹುಡುಗರು ಯಾಮಾರಿಬಿಡ್ತಾರೆ. ಯಾಮಾರಿದ್ರೆ ಮುಗೀತು ಕತೆ, ಬೀದಿಯಲ್ಲಿ ಬಂದು ನಿಂತುಬಿಟ್ಟಂತೆಯೇ ಲೆಕ್ಕ. ಹೌದು ಫೇಸ್‌ಬುಕ್‌ನಲ್ಲಿ ಗೀತಾ ಸೆಕ್ಸಿ ಎಂಬ ಫೇಸ್‌ಬುಕ್ ಪೇಜ್ ಇದೆ. ಈ ಪೇಜ್‌ನಲ್ಲಿ ಫ್ರೆಶ್ ಹುಡುಗಿಯರು ಸಿಗುತ್ತಾರೆ ಎಂದು ಹಾಕಿಕೊಂಡಿದ್ದಾರೆ. ಜೊತೆಗೆ ಯಾವುದೋ ಸುಂದರ ಹುಡುಗಿಯ ಫೋಟೋ ಕೂಡಾ ಇದೆ. ಇದನ್ನು ನಂಬಿದ ಹೋದ ಹುಡುಗನೊಬ್ಬ ಬರೋಬ್ಬರಿ 41 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.
ʻಬೆಂಗಳೂರಿನಿಂದ ಹಾಸನ, ಕುಣಿಗಲ್, ರಾಮನಗರ, ಶಿವಮೊಗ್ಗದವರೆಗೂ ಸರ್ವೀಸ್ ಇದೆ. ಫ್ರೆಶ್ ಹುಡುಗಿರು ಇದ್ದಾರೆ’ ಎಂದು ಗೀತಾ ಸೆಕ್ಸಿ ಫೇಸ್‌ಬುಕ್ ಪೇಜ್ ಬಯೋದಲ್ಲಿ ಬರೆಯಲಾಗಿದೆ. ಇದನ್ನು ನೋಡಿ ಕನಕಪುರದ ಯುವಕನೊಬ್ಬ ಮಾರುಹೋಗಿದ್ದಾನೆ. ಅದರಲ್ಲಿ ಮೆಸೇಜ್ ಮಾಡಿದ್ದಾನೆ. ಆ ಕಡೆಯಿಂದ ಅವರು ಹುಡುಗಿ ಬೇಕಾದರೆ 800 ರೂಪಾಯಿ ಹಣ ಹಾಗೂ ಫೋಟೋ ಕಳುಹಿಸುವಂತೆ ಹೇಳಿದ್ದಾರೆ. ಅದರಂತೆ ಆ ಹುಡುಗ ಹಣ ಹಾಗೂ ಫೋಟೋ ಕಳುಹಿಸಿದ್ದಾನೆ.
ಯಾವಾಗ ಯುವಕ ಫೋಟೋ ಕಳುಹಿಸಿದನೋ ಅದನ್ನು ಮಾರ್ಫ್ ಮಾಡಿ ಬೆತ್ತಲೆ ಮಾಡಿದ್ದಾರೆ. ಅದನ್ನು ವಾಪಸ್ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಸ್ನೇಹಿತರಿಗೆ ಕಳುಹಿಸೋದಾಗಿ ಬೆದರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿಯೂ ಹೇಳಿದ್ದಾರೆ. ಇದರಿಂದಾಗಿ ಗಾಬರಿಯಾದ ಯುವಕ ಹಂತ ಹಂತವಾಗಿ ಅವರಿಗೆ ಹಣ ನೀಡುತ್ತಾ ಬಂದಿದ್ದಾನೆ. ಕಳೆದ ಆರು ತಿಂಗಳಲ್ಲಿ ಸುಮಾರು 41 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾನೆ. ಆನ್‌ಲೈನ್ ಮೂಲಕವೇ ವರ್ಗಾಯಿಸಿಕೊಂಡಿದ್ದಾರೆ.
ಹೀಗಿದ್ದರೂ ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ವಿಧಿಯಿಲ್ಲದೆ ಯುವಕ ಪೊಲೀಸರ ಮೊರೆ ಹೋಗಿದ್ದಾನೆ. ರಾಮನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.