DistrictsPolitics

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ; ಡಿ.ಕೆ.ಶಿವಕುಮಾರ್‌

ಕೋಲಾರ; ಬೊಮ್ಮಾಯಿ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿವೆ. ರಾಜ್ಯದಲ್ಲಿ 40% ಕಮಿಷನ್ ಪಡೆಯಲಾಗುತ್ತಿದ್ದು ಗುಣಮಟ್ಟದ ಕಾಮಗಾರಿ ಅಸಾಧ್ಯ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಯಾವುದಾದರೂ ಒಂದು ತನಿಖೆ ನಡೆಯಿತಾ? ಈ ಭ್ರಷ್ಟಾಚಾರ ತಾಳಲಾರದೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಜನರ ಸಮಸ್ಯೆಗೆ ಪರಿಹಾರ ನೀಡಲು ನಾವು ಕೆಲವು ಯೋಜನೆ ಘೋಷಣೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್ ಸಮಯ ಹೆಚ್ಚಳ, ಅಂತರ್ಜಲ ಹೆಚ್ಚಳ, ಹಾಲಿಗೆ ಬೆಂಬಲ ಬೆಲೆ ನಾವು ಮಾಡಿದ್ದೆವು. ಬೊಮ್ಮಾಯಿ, ಕುಮಾರಸ್ವಾಮಿ ಅವರ ಸರ್ಕಾರ ನೀಡಿತ್ತಾ? ರೈತರಿಗೆ ಸಹಾಯ ಮಾಡಿ ಉಳಿಸಿದ್ದು ಯಾರು? ಎಂದು ಕೇಳಲು ಬಂದಿದ್ದೇವೆ ಎಂದರು. ಕೃಷ್ಣ ಭೈರೇಗೌಡರು ಸಚಿವರಾಗಿದ್ದಾಗ, ಈ ಜಿಲ್ಲೆಯಲ್ಲಿ 1 ಲಕ್ಷ ಕೃಷಿ ಹೊಂಡ ಮಾಡಿಕೊಡಲಾಯಿತು. ರೈತರ ಬದುಕು ಹಸನ ಮಾಡಿದ್ದೇವೆ. ನರೇಗಾ ಯೋಜನೆ ಅಡಿ ಅನೇಕ ಕಾಮಗಾರಿ ಮಾಡಿದ್ದೇವೆ. ಬಿಜೆಪಿ ಸರ್ಕಾರ ಉದ್ಯೋಗ ನೀಡಲಿಲ್ಲ, ಅದರ ಬದಲಿಗೆ ನೇಮಕಾತಿಯಲ್ಲಿ ಅಕ್ರಮ ಮಾಡಿದ್ದಾರೆ. ಲಂಚವಿಲ್ಲದೇ ಯಾವ ನೇಮಕಾತಿಯೂ ಆಗುವುದಿಲ್ಲ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಐಐಎಎಸ್, ಐಪಿಎಸ್ ಅಧಿಕಾರಿಗಳು ಜೈಲು ಸೇರಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ಮಾಡಿದ್ದೇವೆ. ನಂತರ ಬಂದ ಕಾಂಗ್ರೆಸ್ ಸರ್ಕಾರ ಕೂಡ ಜನರಿಗೆ ಜಮೀನು ನೀಡುತ್ತಾ ಬಂದಿದೆ. ಅವುಗಳ ನಂಬರ್ ಪಡೆಯಲು ಸಾವಿರ, ಲಕ್ಷದವರೆಗೂ ಲಂಚ ಕೇಳುತ್ತಿದ್ದಾರೆ. ಇದಕ್ಕೆ ಪರಿಹಾರ ನೀಡಲು ಮುಂದೆ ಬರುವ ಕಾಂಗ್ರೆಸ್ ಸರ್ಕಾರ ಲಂಚ ಕಿತ್ತು ಹಾಕಿ ರೈತರ ಆಸ್ತಿ ಸರಿ ಮಾಡಲು ಕಾರ್ಯಕ್ರಮ ರೂಪಿಸುತ್ತೇವೆ.

ಇನ್ನು ಕಾಂಗ್ರೆಸ್ ಪಕ್ಷ ಎರಡು ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟಿದೆ. ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನಿಟ್ ವಿದ್ಯತ್ ಉಚಿತ ನೀಡುವ ಗೃಹಜ್ಯೋತಿ ಯೋಜನೆ ಹಾಗೂ ಪ್ರತಿ ಮನೆಯೊಡತಿಗೆ ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ನೀಡಲು ಪ್ರತಿ ತಿಂಗಳು 2 ಸಾವಿರ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಕಾಲದಲ್ಲಿ 400 ರೂ. ಇದ್ದ ಗ್ಯಾಸ್ ಬೆಲೆ ಈಗ 1100 ಆಗಿದೆ. ಅಡುಗೆ ಎಣ್ಣೆ 90ರಿಂದ 230 ಆಗಿದೆ. ಈ ಎಲ್ಲ ಸಮಸ್ಯೆಗಳಿಗೆ ಸಹಾಯ ಮಾಡಲು ವರ್ಷಕ್ಕೆ 24 ಸಾವಿರ ನೀಡಲು ಕಾಂಗ್ರೆಸ್ ಪಕ್ಷದ ನಾಯಕರು ಚರ್ಚೆ ಮಾಡಿ ತೀರ್ಮಾನಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮದ್ ಹ್ಯಾರಿಸ್ ನಲಾಪಾಡ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ ಮತ್ತಿತರರು ಭಾಗವಹಿಸಿದ್ದರು.

Share Post