ಬಿಜೆಪಿ 600 ಭರವಸೆ ನೀಡಿತ್ತು, ಆದರೆ 550 ಈಡೇರಿಲ್ಲ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ರಾಮನಗರ; ನಿಮ್ಮ ನೋವು, ಕಷ್ಟಗಳಿಗೆ ಪರಿಹಾರ ನೀಡಲು ನಾವು ಈ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಮಾಡಿದ ಬಿಜೆಪಿ 600 ಭರವಸೆ ನೀಡಿತ್ತು. ಆದರೆ 550 ಈಡೇರಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಾಗಡಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 80 ಹಾಗೂ ಜೆಡಿಎಸ್ 38 ಕ್ಷೇತ್ರಗಳಲ್ಲಿ ಗೆದ್ದಿದ್ದೆವು. ನಾವು ಜೆಡಿಎಸ್ ಪಕ್ಷಕ್ಕೆ ಬೇಷರತ್ತಾಗಿ ಬೆಂಬಲ ನೀಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ನಂತರ ರೈತರ ಸಾಲಮನ್ನಾ ಮಾಡಲು ನಾವು ಕುಮಾರಸ್ವಾಮಿ ಅವರಿಗೆ ಬೆಂಬಲವಾಗಿ ನಿಂತೆವು. ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲೂ 50 ಸಾವಿರವರೆಗಿನ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಈ ಸರ್ಕಾರ ಕೊಟ್ಟ 600 ಭರವಸೆಗಳಲ್ಲಿ ಕೇವಲ 50 ಭರವಸೆ ಈಡೇರಿಸಿದ್ದು, 550 ಭರವಸೆ ಈಡೇರಿಸಲು ವಿಫಲವಾಗಿದೆ ಎಂದು ಹರಿಹಾಯ್ದರು.
ಬಿಜೆಪಿ ಸರ್ಕಾರ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿತ್ತು. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. 1 ಲಕ್ಷವರೆಗಿನ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಈ ಯಾವ ಭರವಸೆಯನ್ನೂ ಬಿಜೆಪಿ ಸರ್ಕಾರ ಈಡೇರಿಸಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಿದೆವು. ನಂತರ ಇದನ್ನು 7 ಕೆ.ಜಿ.ಗೆ ಹೆಚ್ಚಳ ಮಾಡಿದೆವು. ಆದರೆ ಬಿಜೆಪಿ ಸರ್ಕಾರ ಇದನ್ನು 5 ಕೆ.ಜಿಗೆ ಇಳಿಸಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬಡವರ ಕುಟುಂಬಗಳನ್ನು ಉಳಿಸಬೇಕು ಎಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು 10 ಕೆ.ಜಿ.ಗೆ ಹೆಚ್ಚಿಸಲಾಗುವುದು. ಆ ಮೂಲಕ ಹಸಿವುಮುಕ್ತ ರಾಜ್ಯ ನಿರ್ಮಾಣಕ್ಕೆ ಪಣತೊಟ್ಟಿದ್ದೇವೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರೂ ಇಂತಹ ಯೋಜನೆ ಜಾರಿ ಮಾಡಲಿಲ್ಲ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಬಂದರೆ ನುಡಿದಂತೆ ನಡೆಯುತ್ತಾರೆ ಎಂದು ನೀವೆಲ್ಲರೂ ನಂಬಿಕೆ ಇಟ್ಟಿದ್ದೀರಿ ಎಂದು ಡಿಕೆಶಿ ಹೇಳಿದರು.
ಹೆಣ್ಣು ಕುಟುಂಬದ ಕಣ್ಣು, ಆಕೆಗೆ ಶಕ್ತಿ ನೀಡಬೇಕು. ಬೆಲೆ ಏರಿಕೆಯಿಂದ ಮಹಿಳೆಯರು ತಮ್ಮ ಸಂಸಾರ ನಿಭಾಯಿಸುವುದೇ ಕಷ್ಟವಾಗಿದೆ. ಆದಾಯ ಪಾತಾಳಕ್ಕೆ ಕುಸಿದಿದ್ದು, ವಸ್ತುಗಳ ಬೆಲೆ ಗಗನಕ್ಕೇರಿದೆ. ಅಡುಗೆ ಅನಿಲ, ಅಜುಗೆ ಎಣ್ಣೆ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಕಾರಣಕ್ಕೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2000 ರೂ. ನಂತೆ ವರ್ಷಕ್ಕೆ 24 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಇದರ ಜತೆಗೆ ಪ್ರತಿ ಮನೆಗೆ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆ ಮೂಲಕ ಪ್ರತಿ ತಿಂಗಳು 1500ರಂತೆ ವರ್ಷಕ್ಕೆ 18 ಸಾವಿರ ಉಳಿತಾಯ ಮಾಡಬಹುದು. ಈ ಎರಡು ಯೋಜನೆಗಳ ಮೂಲಕ ವರ್ಷಕ್ಕೆ 42 ಸಾವಿರದಂತೆ ಐದು ವರ್ಷಕ್ಕೆ 2.10 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ನಾನು ಇಂಧನ ಸಚಿವನಾದಾಗ ರಾಜ್ಯದಲ್ಲಿ 10 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಇತ್ತು. ನಾನು ಸಚಿವ ಸ್ಥಾನದಿಂದ ಕೆಳಗೆ ಇಳಿಯುವ ಹೊತ್ತಿಗೆ 20 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುವಂತೆ ಮಾಡಿದೆ ಎಂದರು.