CrimeDistricts

ಗ್ರಾಮದಲ್ಲಿ ವಾಂತಿ, ಭೇದಿ; ಬಾಲಕಿ ಸಾವು – ಜಿಲ್ಲಾಧಿಕಾರಿ ಭೇಟಿ

ವಿಜಯನಗರ; ಸಮೀಪದ ಕ್ಯಾಸನಕೆರೆ ಗ್ರಾಮದಲ್ಲಿ ವಾಂತಿ, ಭೇದಿಗೆ ಬಾಲಕಿ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್ ಪಿ. ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಸಂಚರಿಸಿ ಕುಡಿಯುವ ನೀರು ಸರಬರಾಜು ಆಗುವ ಪೈಪ್ ಲೈನ್, ಓವರ್ ಹೆಡ್ ಟ್ಯಾಂಕ್‌ ಹಾಗೂ ಮಿನಿ ಟ್ಯಾಂಕ್ ಗಳನ್ನು ವೀಕ್ಷಿಸಿದ ಅವರು, ಗ್ರಾಮದಲ್ಲಿ ಮತ್ತೊಮ್ಮೆ ಸ್ವಚ್ಛತೆ ಕೈಗೊಳ್ಳುವಂತೆ ಚೌಡಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಕ್ಯಾಸನಕೆರೆ ಗ್ರಾಮದಿಂದ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಾಂತಿ, ಭೇದಿಯಿಂದ ದಾಖಲಾಗಿದ್ದ ರೋಗಿಗಳ ಆರೋಗ್ಯವನ್ನು ಅವರು ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ತಹಶೀಲ್ದಾರ್ ಟಿ.ಜಗದೀಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್, ಸಿ.ಡಿ.ಪಿ.ಒ ನಾಗನಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಇದ್ದರು.

ಕ್ಯಾಸನಕೆರೆ ಗ್ರಾಮದಲ್ಲಿ ವಾಂತಿ, ಭೇದಿಯಿಂದ ಆ.12 ರಂದು ಬಿಂದು ಎಂಬ ಬಾಲಕಿ ಮೃತಪಟ್ಟಿದ್ದಳು. ಹತ್ತು ಜನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಕಲುಷಿತ ನೀರು ಸೇವನೆಯೇ ಘಟನೆಗೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ಇದುವರೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಂತರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಲೀಂ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮದಲ್ಲಿ ತಾತ್ಕಾಲಿಕ ತಪಾಸಣಾ ಕೇಂದ್ರವೂ ತೆರಯಲಾಗಿತ್ತು.

Share Post