ನಾನು ಈಗ ಕಾಂಗ್ರೆಸ್‌ನಲ್ಲಿದ್ದೇನೆ, ನನ್ನ ಬಗ್ಗೆ ಮಾತನಾಡುವ ಹಕ್ಕು ಜೆಡಿಎಸ್‌ಗಿಲ್ಲ; ಶಾಸಕ ಶ್ರೀನಿವಾಸ ಗೌಡ
ಕೋಲಾರ; ನಾನು ಯಾವತ್ತೋ ಜೆಡಿಎಸ್ ಪಕ್ಷ ಬಿಟ್ಟಿದ್ದೇನೆ. ನನ್ನ ವಿರುದ್ಧ ಮಾತನಾಡಲು ಜೆಡಿಎಸ್‌ನವರಿಗೆ ಯಾವುದೇ ಹಕ್ಕಿಲ್ಲ ಎಂದು ಕೋಲಾರ ಶಾಸಕ ಶ್ರೀನಿವಾಸ ಗೌಡ ಹೇಳಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ಗೆ ಮತ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಸುದ್ದಿಗೋಷ್ಠಿ ನಡೆಸಿದ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈಗ ಕಾಂಗ್ರೆಸ್‌ನಲ್ಲಿದ್ದೇನೆ. ನಾನು ಯಾವುದೇ ಪಕ್ಷಕ್ಕಾದರೂ ಹೋಗಬಹುದು. ಅದು ನನ್ನಹಕ್ಕು ಎಂದರು.
ಕೋಲಾರದಲ್ಲಿ ಅಭಿವೃದ್ಧಿ ಏನು ಮಾಡಬೇಕೆಂಬ ಪ್ರಯತ್ನ ಮುಂದುವರೆಸಿದ್ದೇನೆ. ಒಳ್ಳೆಯ ಕಾರ್ಯಕ್ರಮಗಳಿಗೆ ಅವಕಾಶ ಸಿಕ್ಕಾಗ ಕೆಲಸ ಮಾಡಿದ್ದೇನೆ. ಆಗ ಬಿ-ಫಾರಂ ನೀಡಲು ಜೆಡಿಎಸ್ಗೆ ಗತಿ ಇರಲಿಲ್ಲ. ಅದಕ್ಕಾಗಿ ನನಗೆ ಕೊಟ್ಟರು ಎಂದು ತಿಳಿಸಿದ್ರು. ನಜೀರ್ ಸಾಬ್, ಬೈರೇಗೌಡರು ನನ್ನ ಗುರುಗಳು. ನಾನು ಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಶಾಸಕರೂ ಆಗಿರಲಿಲ್ಲ. ಆ ಪಕ್ಷದಲ್ಲಿ ನನ್ನ ಸೀನಿಯಾರಿಟಿಗೆ ಬೆಲೆ ಕೊಡಲಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ನನಗೆ ಬಿಫಾರಂ ಕೊಡ್ತಾರೋ ಇಲ್ವೋ ಬೇಕಿಲ್ಲ. ಅದೀಗ ನನಗೆ ಮುಖ್ಯ ಅಲ್ಲ. ಈಗ ನಾನು ಕಾಂಗ್ರೆಸ್ನಲ್ಲಿ ಇದ್ದೇನೆ ಎಂದರು.