Districts

ಮೋದಿಗೆ ಸಾಫ್ಟ್‌ವೇರ್‌ ಎಂಜಿನಿಯರ್‌ ಪತ್ರ; ಎರಡೇ ದಿನಕ್ಕೆ ಚರಂಡಿ ರೆಡಿ

ಮಂಡ್ಯ; ವರ್ಕ್‌ ಫ್ರಂ ಹೋಮ್‌ ಮಾಡುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರು ಮನೆ ಮುಂದಿನ ಚರಂಡಿ ಸರಿ ಮಾಡುವಂತೆ ಗ್ರಾಮ ಪಂಚಾಯತ್‌ ಅಧಿಕಾರಿಗಳಿಗೆ ಎಷ್ಟು ಹೇಳಿದರೂ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ, ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಆನ್‌ಲೈನ್‌ ಮೂಲಕ ದೂರು ಸಲ್ಲಿಸಿದ್ದರು. ಆ ದೂರಿಗೆ ಕೂಡಲೇ ಸ್ಪಂದನೆ ಸಿಕ್ಕಿದ್ದು, ಎರಡನೇ ದಿನದಲ್ಲಿ ಚರಂಡಿ ರೆಡಿ ಮಾಡಲಾಗಿದ್ದು, ಸಮಸ್ಯೆ ಬಗೆಹರಿಸಿದೆ.

ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮದ ಸಾಫ್ಟ್‌ವೇರ್‌ ಎಂಜಿನಿಯರ್‌ ಚಂದ್ರಶೇಖರ್‌ ಎಂಬುವವರೇ ಪ್ರಧಾನಿಗೆ ದೂರು ಸಲ್ಲಿಸಿದ್ದವು. ಅವರು ಕೊರೋನಾ ಬಳಿಕ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರ ಮನೆ ಮುಂದಿನ ಚರಂಡಿ ಹದಗೆಟ್ಟಿದ್ದು, ಅದನ್ನು ಸರಿ ಮಾಡುವಂತೆ ಪಂಚಾಯತ್‌ಗೆ ದೂರು ಕೊಟ್ಟಿದ್ದರು. ಆದ್ರೆ ಅವರು ಗಮನ ಹರಿಸಿರಲಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಹೀಗಾಗಿ, ಚಂದ್ರಶೇಖರ್‌ ಅವರು ಜುಲೈ 5ರಂದು ಪ್ರಧಾನಿ ಕಾರ್ಯಾಲಯಕ್ಕೆ ಆನ್‌ಲೈನ್‌ ಮೂಲಕ ದೂರು ಸಲ್ಲಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಸ್ಪಂದಿಸಿರುವ ಪ್ರಧಾನಿ ಕಾರ್ಯಾಲಯ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿಗೆ ಸೂಚನೆ ಕೊಟ್ಟಿತ್ತು.

ಇದರಿಂದ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ ಸುಶೀಲ, ತಕ್ಷಣ ಸ್ವಚ್ಛ ಭಾರತ್‌ ಮಿಷನ್ ಯೋಜನೆಯಡಿ ಚರಂಡಿ ನಿರ್ಮಿಸಿ,  ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸುವಂತೆ ಮಂಡ್ಯ ತಾಲೂಕು ಪಂಚಾಯಿತಿ ಇಒಗೆ ಪತ್ರ ಬರೆದಿದ್ದರು.

ಈ ಪತ್ರ ಬರುತ್ತಿದ್ದಂತೆ ನವೆಂಬರ್‌ 9ರಿಂದ ಚರಂಡಿ ಕೆಲಸ ಆರಂಭವಾಗಿ ಎರಡೇ ದಿನದಲ್ಲಿ ಬೂದನೂರು ಗ್ರಾಮ ಪಂಚಾಯತ್‌ ಕೆಲಸ ಮುಗಿಸಿದೆ. ಆದ್ರೆ ಅರ್ಧಂಬರ್ಧ ಕಾಮಗಾರಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

 

Share Post