CrimeDistricts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ 1 ಕೋಟಿ 24 ಲಕ್ಷ ರೂ. ಕಳವು!

ಧಾರವಾಡ; ಹಬ್ಬದ ಸಂದರ್ಭದಲ್ಲಿ ಕಳ್ಳರು ಭರ್ಜರಿ ಕರಾಮತ್ತು ನಡೆಸಿದ್ದಾರೆ. ಧಾರವಾಡದ ರಾಯಪುರ ಬಡಾವಣೆಯಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿಯಲ್ಲಿನ ಲಾಕರ್‌ಗಳನ್ನು ಮುರಿದು ಬರೋಬ್ಬರಿ 1 ಕೋಟಿ 24 ಲಕ್ಷ ರೂಪಾಯಿಗಳನ್ನು ಕಳವು ಮಾಡಲಾಗಿದೆ.

ಇಲ್ಲಿನ ಕಚೇರಿಯಲ್ಲಿ ಒಟ್ಟು ನಾಲ್ಕು ಲಾಕರ್‌ಗಳಲ್ಲಿದ್ದವು. ಕಚೇರಿ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ನಾಲ್ಕೂ ಲಾಕರ್‌ಗಳನ್ನು ಮುರಿದಿದ್ದಾರೆ. ಅದರಲ್ಲಿದ್ದ 1 ಕೋಟಿ 24 ಲಕ್ಷ ರೂಪಾಯಿ ನಗದನ್ನು ದೋಚಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್‍ಗಳು ಊಟಕ್ಕೆ ಹೋದ ಸಮಯದಲ್ಲಿ ಕಚೇರಿಯ ಶೌಚಾಲಯದ ಕಿಟಕಿ ಮುರಿದು ಒಳನುಗ್ಗಿದ ಕಳ್ಳರು ಕೃತ್ಯ ಎಸಗಿದ್ದಾರೆ.

ಕಳ್ಳರು ಸಿಸಿ ಟಿವಿ ಕ್ಯಾಮೆರಾ ಅಳವಡಿಸದ ಭಾಗದಿಂದಲೇ ಬಂದು ಈ ಕೃತ್ಯ ಎಸಗಿದ್ದಾರೆ. ಹೀಗಾಗಿ, ಈ ಪ್ರದೇಶದ ಬಗ್ಗೆ ಸರಿಯಾದ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಯಾವಾಗಲೂ ಧಾರವಾಡ ಜಿಲ್ಲೆಯಾದ್ಯಂತ ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ ಅಡಿಯಲ್ಲಿ ಸಂಗ್ರಹವಾಗುತ್ತಿದ್ದ ಹಣವನ್ನು ಅದೇ ದಿನ ಬ್ಯಾಂಕ್‍ಗೆ ಡೆಪಾಸಿಟ್ ಮಾಡಲಾಗುತ್ತಿತ್ತು. ಆದ್ರೆ ದಸರಾ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಹಣವನ್ನು ಬ್ಯಾಂಕ್‌ಗೆ ಡೆಪಾಸಿಟ್‌ ಮಾಡಲು ಆಗಿರಲಿಲ್ಲ.

ಹೀಗಾಗಿ ಹಣವನ್ನು ಸಂಸ್ಥೆಯ ಲಾಕರ್‌ನಲ್ಲಿ ಇಡಲಾಗಿತ್ತು. ಇದರ ಮಾಹಿತಿಯನ್ನು ತಿಳಿದುಕೊಂಡೇ ಈ ಕಳವು ಮಾಡಲಾಗಿದೆ. ಸಿಬ್ಬಂದಿ ಕೂಡಾ ಇದರಲ್ಲಿ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಕೂಡಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Share Post