ಟ್ರಸ್ಟ್‌ನಲ್ಲಿ ಸ್ಥಾನ ಕೊಡದ ಆರೋಪ; ಆರ್.ಎಲ್.ಜಾಲಪ್ಪ ಕುಟುಂಬ ಪ್ರತಿಭಟನೆ
ಕೋಲಾರ: ಇಲ್ಲಿನ ಟಮಕದಲ್ಲಿರುವ ದೇವರಾಜ ಅರಸು ಮೆಡಿಕಲ್ ಕಾಲೇಜಿನ ಬಳಿ ಭಾರಿ ಹೈಡ್ರಾಮಾ ನಡೆದಿದೆ. ದೇವರಾಜ ಅರಸು ಎಜುಕೇಷನ್ ಟ್ರಸ್ಟ್ ಮಾಡಿ ಕಾಲೇಜುಗಳನ್ನು ಸ್ಥಾಪನೆ ಮಾಡಿದ್ದ ಕೇಂದ್ರ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಇಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕಾರಣ ಟ್ರಸ್ಟ್‌ನಲ್ಲಿ ಅಧಿಕಾರ ವಿಚಾರ.
ಆರ್.ಎಲ್.ಜಾಲಪ್ಪನವರು ಇತ್ತೀಚೆಗಷ್ಟೇ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಹೀಗಾಗಿ ದೇವರಾಜ ಅರಸು ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಆ ಸ್ಥಾನಕ್ಕೆ ಜಾಲಪ್ಪ ಕುಟುಂಬದಲ್ಲೇ ಒಬ್ಬರನ್ನು ಆಯ್ಕೆ ಮಾಡಲಾಗುತ್ತೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಹಲವು ದಶಕಗಳಿಂದ ದೇವರಾಜ ಅರಸು ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಜಾಲಪ್ಪ ಅವರ ಸಂಬಂಧಿ ಜಿ.ಹೆಚ್.ನಾಗರಾಜ್ ಈಗ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಹುದ್ದೆಯನ್ನೂ ಜಾಲಪ್ಪ ಕುಟುಂಬದವರಲ್ಲದ ಬೇರೆಯವರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜಾಲಪ್ಪ ಅವರ ಮಕ್ಕಳು ಹಾಗೂ ಬೆಂಬಲಿಗರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವರಾಜ ಅರಸು ಎಜುಕೇಷನ್ ಟ್ರಸ್ಟ್ ಅಡಿಯಲ್ಲಿ ಕೋಲಾರದ ಟಕಮದಲ್ಲಿ ಮೆಡಿಕಲ್ ಕಾಲೇಜು ನಡೆಯುತ್ತಿದೆ. ಇನ್ನು ದೊಡ್ಡಬಳ್ಳಾಪುರದಲ್ಲಿ ಜಾಲಪ್ಪ ಎಂಜಿನಿಯರಿಂಗ್ ಕಾಲೇಜಿದೆ. ಇವುಗಳನ್ನು ಜಾಲಪ್ಪ ಅವರೇ ಸ್ಥಾಪನೆ ಮಾಡಿದ್ದರು. ಆದ್ರೆ ಈ ಟ್ರಸ್ಟ್‌ನಲ್ಲಿ ಈಗ ಅವರ ಕುಟುಂಬದವರು ಯಾರೂ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜಾಲಪ್ಪ ಅವರ ಮಕ್ಕಳು ಹಾಗೂ ಅಭಿಮಾನಿಗಳು ಇಂದು ಕೋಲಾರದ ಟಮಕದಲ್ಲಿರುವ ಟ್ರಸ್ಟ್‌ನ ಕಚೇರಿ ಮುಂದೆ ಧರಣಿ ನಡೆಸಿದರು.
ಧರಣಿ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಇದ್ರಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ತಲೆಗೆ ಗಾಯವಾಗಿದೆ.