ಸಂತೋಷ್ ಆತ್ಮಹತ್ಯೆ ಪ್ರಕರಣ; ಸಿಡಿ ತಯಾರಿಸಿದ್ದ ಮಹಾ ನಾಯಕನ ಕೈವಾಡ – ಜಾರಕಿಹೊಳಿ
ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಹಿಂದೆ ನನ್ನ ಸಿಡಿ ತಯಾರಿಸಿದ್ದ ಮಹಾನಾಯಕನ ಕೈವಾಡವಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಆರೋಪಿಸಿದ್ದಾರೆ.
ಸಂತೋಷ್ ಆತ್ಮಹತ್ಯೆಗೆ ಕಾರಣ ಏನು ಎಂಬುದಕ್ಕೆ ನನ್ನ ಬಳಿ ದಾಖಲೆಗಳಿವೆ. ಅವುಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ವರಿಷ್ಠರು ಅನುಮತಿ ನೀಡಿದರೆ ಸೂಮವಾರೇ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಸಚಿವ ಕೆ.ಎಸ್.ಈಶ್ವರಪ್ಪರನ್ನು ಕೆಳಗಿಳಿಸಲು ಈ ಷಡ್ಯಂತ್ರ ಮಾಡಲಾಗಿದೆ. ಆದ್ರೆ ಈಶ್ವರಪ್ಪ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ನನ್ನ ಹಾಗೂ ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ರಮೇಶ್ ಜಾರಕಿಹೊಳಿ ಆಗ್ರಹಿಸಿದರು. ಇದಕ್ಕೂ ಮೊದಲು ಬಡಸ್ ಗ್ರಾಮದಲ್ಲಿ ಸಂತೋಷ್ ಪಾಟೀಲ್ ಅವರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಹೂವಿನ ಹಾರ ಅರ್ಪಿಸಿದರು.