RAICHUR BUNDH: ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಪಟ್ಟು; ರಾಯಚೂರು ಬಂದ್‌ಗೆ ಉತ್ತಮ ಬೆಂಬಲ
ರಾಯಚೂರು: ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿದ ವಿಚಾರ ಸಂಬಂಧ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಇಂದು ರಾಯಚೂರು ಬಂದ್‌ಗೆ ಕರೆ ನೀಡಲಾಗಿದೆ. ಬಂದ್‌ಗೆ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಲಿತ ಸಂಘಟನೆಗಳ ಒಕ್ಕೂಟದಿಂದ ಬಂದ್‌ಗೆ ಕರೆ ನೀಡಲಾಗಿದ್ದು, ಇದಕ್ಕೆ ಎಲ್ಲಾ ಸಂಘಟನೆಗಳೂ ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ, ಎಲ್ಲಾ ವ್ಯಾಪಾರ ವಹಿವಾಟುಗಳೂ ಸ್ತಬ್ಧವಾಗಿವೆ. ತರಕಾರಿ ವ್ಯಾಪಾರಿಗಳ ಸಂಘ, ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಸೇರಿದಂತೆ 30ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.
ರಾಯಚೂರಿನ ತರಕಾರಿ ಮಾರುಕಟ್ಟೆ ಇಂದು ಸಂಪೂರ್ಣ ಬಂದ್ ಆಗಿದೆ. ಕೇಂದ್ರ ಬಸ್ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ವಾಹನ ಓಡಾಟವೂ ಸಂಪೂರ್ಣ ಸ್ಥಗಿತವಾಗಿದೆ. ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ರಾಯಚೂರು ತಾಲ್ಲೂಕು ಪೂರ್ತಿ ಇದರಿಂದಾಗಿ ಸಂಪೂರ್ಣ ಸ್ತಬ್ಧವಾಗಿದೆ.