ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ; ಆರೋಪಿ ದಿವ್ಯಾ ಹಾಗರಗಿಗಾಗಿ ಹುಡುಕಾಟ
ಕಲಬುರಗಿ: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ತನಿಖೆಯನ್ನು ಸಿಐಡಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಪ್ರಕರಣದ ಆರೋಪಿ ರಾಜೇಶ್ ಹಾಗರಗಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಅವರ ಪತ್ನಿ ಹಾಗೂ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಪರೀಕ್ಷಾ ಅಕ್ರಮದಲ್ಲಿ ದಿವ್ಯಾ ಹಾಗರಗಿ ಶಾಮೀಲಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶನಿವಾರ ದಿವ್ಯಾ ಅವರ ಮನೆ ಮೇಲೆ ದಾಳಿ ನಡಸಲಾಗಿತ್ತು. ಜೇವರ್ಗಿ ರಸ್ತೆಯಲ್ಲಿರುವ ದಿವ್ಯಾ ಹಾಗರಗಿ ಅವರ ಮನೆ ಮೇಲೆ ಸಿಐಡಿ ಡಿವೈಎಸ್ಪಿ ಶಂಕರೇಗೌಡ ನೇತೃತ್ವದ ತಂಡ ದಾಳಿ ಮಾಡಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಪಿಎಸ್ಐ ನೇಮಕಾತಿ ಅಕ್ರಮದ ಸಂಬಂಧ ಮೊದಲ ಆರೋಪಿ ಬಂಧನಕ್ಕೆ ಒಳಗಾದ ದಿನದಿಂದಲೂ ದಿವ್ಯಾ ಅವರು ನಾಪತ್ತೆಯಾಗಿದ್ದಾರೆ. ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಅವರನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದರು. ಅವರು ಊರಿಗೆ ಹೋಗಿದ್ದು, ಕೆಲವೇ ದಿನದಲ್ಲಿ ಬರುವುದಾಗಿ ಅವರು ತಿಳಿಸಿದ್ದರು. ಆದ್ರೆ ದಿವ್ಯಾ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನಡೆದ ಪಿಎಸ್ಐ ನೇಮಕಾತಿ ಪರೀಕ್ಷೆ ವೇಳೆ ಕೆಲವು ಅಭ್ಯರ್ಥಿಗಳು ಉತ್ತರ ಪತ್ರಿಕೆಯನ್ನು ಕೊಠಡಿ ಪರಿವೀಕ್ಷಕರಿಗೆ ನೀಡಿ ಅಕ್ರಮ ಎಸಗಿರುವುದು ಸಿಐಡಿ ಪೊಲೀಸರು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿತ್ತು. ಕಳೆದ ಶನಿವಾರ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆಯ ಸಿಬ್ಬಂದಿ ಸುಮಾ, ಸುಮಿತ್ರಾ, ಸಿದ್ದಮ್ಮ ಅವರನ್ನು ಬಂಧಿಸಲಾಗಿತ್ತು. ಬಂಧಿತರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಶಾಲೆ ಮಾಲೀಕರಾದ ದಿವ್ಯಾ ಹಾಗರಗಿ ಅವರ ಮನೆ ಮೇಲೆ ದಾಳಿ ನಡೆಲಾಗಿತ್ತು.