ನಮ್ಮ ಸರ್ಕಾರ ಮೊದಲ ಕ್ಯಾಬಿನೆಟ್‌ನಲ್ಲೇ ಎಲ್ಲಾ ಭರವಸೆ ಈಡೇರಿಸುತ್ತೆ; ರಾಹುಲ್ ಗಾಂಧಿ
ಕೋಲಾರ; ಕರ್ನಾಟಕದಲ್ಲಿ ಕಾಂಗ್ರೆಸ್ ಜನರಿಗೆ ನಾಲ್ಕು ಭರವಸೆಗಳನ್ನು ನೀಡಿದೆ. ಆ ನಾಲ್ಕೂ ಭರವಸೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮೊದಲ ಕ್ಯಾಬಿನೆಟ್ ಮೀಟಿಂಗ್‌ನಲ್ಲೇ ಈಡೇರಿಸಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿಳಿಸುತ್ತಿದ್ದೇನೆ ಎಂಧು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕೋಲಾರದಲ್ಲಿ ನಡೆಯುತ್ತಿರುವ ಜೈ ಭಾರತ್ ಸಮಾವೇಶದಲ್ಲಿ ಮಾತನಾಡಿದರು.
ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ, ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರಿಗೆ ಪ್ರತಿ ತಿಂಗಳೂ ಹತ್ತು ಕೆಜಿ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಹಾಗೂ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ನೀಡುವ ಯುವನಿಧಿ ಯೋಜನೆಗಳನ್ನು ನೀಡೋದಾಗಿ ನಾವು ಭರವಸೆ ನೀಡುತ್ತಿದ್ದೇವೆ. ಈ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆಯೇ ಈಡೇರಿಸಲಾಗುತ್ತದೆ ಎಂದು ಹೇಳಿದರು.
ಅದಾನಿಯವರು ಸಾವಿರಾರು ಕೋಟಿ ರೂಪಾಯಿ ಅಸ್ತಿ ಮಾಡೋದಕ್ಕೆ ಮೋದಿಯವರು ಸಹಕಾರ ನೀಡುತ್ತಿದ್ದಾರೆ. ಆದ್ರೆ ನಾವು ಬಡವರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ. ನಿಮ್ಮ ಕೆಲಸ ನೀವು ಮಾಡಿ, ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಮೋದಿಗೆ ರಾಹುಲ್ ಗಾಂಧಿ ಸವಾಲು ಹಾಕಿದರು. ನಾವು ಸದನದಲ್ಲಿ ಅದಾನಿಯವರ ಬಗ್ಗೆ ಪ್ರಶ್ನೆ ಮಾಡುತ್ತಿದ್ದೆ. ಆಗ ನನ್ನ ಮೈಕ್ ಆಫ್ ಮಾಡಲಾಯಿತು. ಆಗ ನಾನು ಕೇಳಿದ ಪ್ರಶ್ನೆಯಾದರೂ ಏನು..? ನಿಮಗೆ ಹಾಗೂ ಅದಾನಿಗೆ ಯಾವ ಸಂಬಂಧ ಇದೆ ಎಂದು ಕೇಳಿದೆ. ನಾನು ಒಂದು ಚಿತ್ರ ತೋರಿಸಿದೆ, ಅದರಲ್ಲಿ ಒಂದು ವಿಮಾನದಲ್ಲಿ ಅದಾನಿ, ಮೋದಿ ಕೂತಿದ್ದರು. ದೇಶದ ವಿಮಾನ ನಿಲ್ದಾಣಗಳನ್ನು ಅದಾನಿಗೆ ಕೊಡುತ್ತಿದ್ದಾರೆ. ಕಾನೂನು ಮೀರಿ ಯಾಕೆ ಕೊಡುತ್ತಿದ್ದಾರೆ ಎಂದು ಕೇಳಿದೆ. ಅನುಭವ ಇರುವವರೆಗೆ ಏರ್‌ಪೋರ್ಟ್ ಕೊಡಬೇಕು. ಆದ್ರೆ ಅದಾನಿಗೆ ಅನುಭವಿಲ್ಲದಿದ್ದರೂ ಹೇಗೆ ವಿಮಾನ ನಿಲ್ದಾಣಗಳನ್ನು ಕೊಟ್ಟರು ಎಂದು ಪ್ರಶ್ನೆ ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ನಾನು ಅದಾನಿಯವರ ಬಗ್ಗೆ ಮಾತನಾಡಿದರೆ ಅವರು ಭಯ ಬೀಳುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ನನ್ನನ್ನು ಪಾರ್ಲಿಮೆಂಟ್‌ನಿಂದ ಅನರ್ಹ ಮಾಡುತ್ತಾರೆ. ಆದ್ರೆ ಇದಕ್ಕೆ ನಾನು ಭಯ ಬೀಳುತ್ತಿಲ್ಲ. ನಾನು ಈಗಲೂ ಪ್ರಶ್ನೆ ಮಾಡುತ್ತೇನೆ. ಅದಾನಿ ಸುಪರ್ದಿಯಲ್ಲಿರುವ ನಕಲಿ ಕಂಪನಿಗಳಲ್ಲಿರುವ 20 ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬಂತು ಕೇಳುತ್ತೇನೆ. ನನ್ನನ್ನು ಜೈಲಿಗೆ ಹಾಕಿದರೂ ನಾನು ಪ್ರಶ್ನೆ ಮಾಡುತ್ತಲೇ ಇದ್ದೇನೆ. ಅದಾನಿಯವರು ಮೋದಿಗೆ ಭ್ರಷ್ಟಾಚಾರ ಚಿಹ್ನೆಯಾಗಿದ್ದಾರೆ.