Districts

ಲಕ್ಷ್ಮೀ ಹೆಬ್ಬಾಳ್ಕರ್‌ ಕಾರ್ಖಾನೆಯದ್ದೂ ಸಾಲ ಇದೆ; ಸಚಿವ ಎಸ್‌.ಟಿ.ಸೋಮಶೇಖರ್‌

ಬೆಳಗಾವಿ: ಶಾಸಕ ರಮೇಶ್‌ ಜಾರಕಿಹೊಳಿ ಅಷ್ಟೇ ಅಲ್ಲ, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಸಕ್ಕರೆ ಕಾರ್ಖಾನೆಯದ್ದೂ ಬಾಕಿ ಇದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ವಿಚಾರವಾಗಿ ಕಾಂಗ್ರೆಸ್‌ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಸೋಮಶೇಖರ್‌ ಈ ವಿಚಾರ ತಿಳಿಸಿದ್ದಾರೆ. ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು 6 ಸಾವಿರ‌ ಕೋಟಿ ರೂಪಾಯಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ.

ಯಾವೆಲ್ಲಾ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆಯೋ ಅವೆಲ್ಲವಕ್ಕೂ ನೋಟಿಸ್‌ ಜಾರಿ ಮಾಡಲಾಗಿದೆ. ಸಾಲ ಮರುಪಾವತಿ ಮಾಡುವಂತೆ ಸೂಚಿಸಲಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು. ರಮೇಶ ಜಾರಕಿಹೊಳಿ ಮಾತ್ರವಲ್ಲ, ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ್, ಜೆಡಿಎಸ್‌ನ‌‌ ಬಂಡೆಪ್ಪ ಕಾಂಶಪೂರ ಮೊದಲಾದವರು ಕೂಡ ಬಾಕಿ ಉಳಿಸಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆ ಇರುವ 24 ಜನರು ಸಾಲ ಪಡೆದಿದ್ದಾರೆ. ನೂರಾರು ಕೋಟಿ ರೂಪಾಯಿ ಸಾಲ ಪಡೆದಿರುವವರ ವಿರುದ್ಧ ಅಪೆಕ್ಸ್ ಬ್ಯಾಂಕ್‌ ಕ್ರಮ ಕೈಗೊಂಡಿದೆ. ವಸೂಲಾತಿಗೆ ಇಲಾಖೆಯಿಂದಲೂ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.

ಕೆಲವರು ಬಡ್ಡಿ ಹಾಗೂ ಅಸಲು ಎರಡನ್ನೂ ಕಟ್ಟಿಲ್ಲ. ಕೆಲವರು ಬಡ್ಡಿಯನ್ನು ನಿಯಮಿತವಾಗಿ ಪಾವತಿಸುತ್ತಿದ್ದಾರೆ. ದಕ್ಷಿಣ ಕನ್ನಡ, ತುಮಕೂರು ಮೊದಲಾದ ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ವಸೂಲಿ ಮಾಡಲು ಗಂಭೀರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಸೋಮಶೇಖರ್‌ ತಿಳಿಸಿದ್ದಾರೆ.

Share Post