DistrictsPolitics

ಕೆ.ಹೆಚ್‌.ಮುನಿಯಪ್ಪ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳ್ತಾರಾ..?; ಅವರ ಬೆಂಬಲಿಗರು ಏನಂತಾರೆ..?

ಕೋಲಾರ; ಚಿಂತಾಮಣಿಯ ಸುಧಾಕರ್‌ ರೆಡ್ಡಿ ಹಾಗೂ ಕೊತ್ತೂರು ಮಂಜು ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರುತ್ತಿದ್ದಂತೆ ಕೋಲಾರದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಕಾಂಗ್ರೆಸ್‌ ಹಿರಿಯ ನಾಯಕ ಕೆ.ಎಚ್‌.ಮುನಿಯಪ್ಪ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಕೆ.ಎಚ್‌.ಮುನಿಯಪ್ಪ ದಶಕಗಳಿಂದ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್‌ ಪಕ್ಷವನ್ನು ತೊರೆಯುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ಮೂಲಗಳ ಪ್ರಕಾರ ಅವರು ಜೆಡಿಎಸ್‌ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಸುಧಾಕರ್‌ ರೆಡ್ಡಿ ಹಾಗೂ ಕೊತ್ತೂರು ಮಂಜುನಾಥ್‌ ಅವರನ್ನು ಕಾಂಗ್ರೆಸ್‌ ಸೇರಿಸಿಕೊಂಡಿದ್ದರಿಂದ ಅಸಮಾಧಾನಗೊಂಡಿದ್ದ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಇಂದು ಕೋಲಾರದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಹಾಗೂ ಕೆ.ಆರ್‌.ರಮೇಶ್‌ ಕುಮಾರ್‌ ವಿರುದ್ಧ ಆಕ್ರೋಶಗಳು ವ್ಯಕ್ತವಾದವು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿ ಬಿಜೆಪಿ ಬೆಂಬಲಿಸಿದ ಕಳ್ಳರನ್ನು, ವ್ಯಾಪಾರಿಗಳನ್ನು ಪಕ್ಷಕ್ಕೆ ಕರೆತರಲಾಗಿದೆ. ಅವರು ರಾತ್ರಿ ಬೇರೆ ಪಕ್ಷದಲ್ಲಿರುತ್ತಾರೆ. ಹಗಲು ಕಾಂಗ್ರೆಸ್ ನಲ್ಲಿರುತ್ತಾರೆ. ಪಕ್ಷ ಕಟ್ಟಿ ಬೆಳೆಸಿದ ಮುನಿಯಪ್ಪ ಅವರನ್ನು ಮೂಲೆಗುಂಪು ಮಾಡಲು ಪ್ರಯತ್ನ ನಡೆದಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ಬಡವರ ನಿಜವಾದ ನಾಯಕ ಮುನಿಯಪ್ಪ. ರಾಜಕೀಯ ವ್ಯಾಪಾರದಲ್ಲಿ ತೊಡಗಿರುವ ನೀವು ನಕಲಿ ನಾಯಕರು. ಮುನಿಯಪ್ಪ ಆಸರೆಯಲ್ಲಿ ಬೆಳೆದವರು ಈಗ ಅವರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ರಮೇಶ್ ಕುಮಾರ್ ಶಕುನಿ. ವಿರೋಧ ಪಕ್ಷದ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರು ಕೊತ್ತೂರು ಮಂಜುನಾಥ್, ಸುಧಾಕರ್ ಹೆಗಲ ಮೇಲೆ ಕೈಹಾಕಿಕೊಂಡು ಓಡಾಡುತ್ತಾರೆ ಎಂದು ಹರಿಹಾಯ್ದರು.

‘ಮುನಿಯಪ್ಪ ಬಿಜೆಪಿ ಹೊರತುಪಡಿಸಿ ಯಾವುದೇ ಪಕ್ಷ ಸೇರಿದರೂ ನಮ್ಮ ಬೆಂಬಲವಿದೆ’ ಎಂದರು‌. ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

 

Share Post