ಇಂದು ಕೋಲಾರದಲ್ಲಿ ಜೈ ಭಾರತ್ ಕಾಂಗ್ರೆಸ್ ಸಮಾವೇಶ; ಕಾಂಗ್ರೆಸ್ ರಣ ಕಹಳೆ
ಕೋಲಾರ; ಕಾಂಗ್ರೆಸ್ ಬೃಹತ್ ಸಮಾವೇಶದ ಮೂಲಕ ಚುನಾವಣೆ ರಣಕಹಳೆ ಮೊಳಗಿಸುತ್ತಿದೆ. ಚುನಾವಣೆ ಘೋಷಣೆಯಾದ ಮೇಲೆ ಮೊದಲ ಬಾರಿಗೆ ರಾಹುಲ್‌ಗಾಂಧಿ ನೇತೃತ್ವದಲ್ಲಿ ಇಂದು ಕೋಲಾರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಜೈ ಭಾರತ್ ಸಮಾವೇಶ ಆಯೋಜಿಸಲಾಗಿದೆ. ಬೆಳಗ್ಗೆ 11.30ಕ್ಕೆ ಸಮಾವೇಶ ನಡೆಯಲಿದೆ. ಖರ್ಗೆ, ಕಾಂಗ್ರೆಸ್‌ನ ಮುಖ್ಯಮಂತ್ರಿಗಳು, ಪ್ರಿಯಾಂಕಾ ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಇದೇ ಕೋಲಾದಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ ಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ ಎಂದು ಪ್ರಶ್ನೆ ಮಾಡಿದ್ದರು. ಈ ಕಾರಣದಿಂದಾಗಿ ಅವರು ಶಿಕ್ಷೆಗೊಳಗಾಗಿದ್ದು, ಸಂಸತ್ ಸ್ಥಾನದಿಂದಲೂ ಅನರ್ಹಗೊಂಡಿದ್ದಾರೆ. ಇದೀಗ ಇದೇ ಸ್ಥಳದಿಂದ ಕಾಂಗ್ರೆಸ್ ಪ್ರಚಾರ ಶುರು ಮಾಡುತ್ತಿದೆ. ಹೀಗಾಗಿ ರಾಹುಲ್ ಭಾಷಣ ಕುತೂಹಲ ಕೆರಳಿಸಿದೆ.
ಸಮಾವೇಶಕ್ಕೆ ಕೋಲಾರ ಟಮಕದಲ್ಲಿ 11 ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಹಾಗೂ ವೇದಿಕೆ ಸಜ್ಜುಗೊಂಡಿದೆ. ಒಂದು ಲಕ್ಷ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕರ್ತರನ್ನು ಕರೆತರಲು 750ಕ್ಕೂ ಹೆಚ್ಚು ಸರ್ಕಾರಿ ಬಸ್ ಮತ್ತು 650ಕ್ಕೂ ಹೆಚ್ಚು ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿನ ಪಕ್ಷದ ಕಾರ್ಯಕರ್ತರು ಹಾಗೂ ಇತರರನ್ನು ಕರೆ ತರುತ್ತಿದ್ದಾರೆ.