ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮೇಕೆದಾಟು ಯೋಜನೆ ಮಾಡ್ತೀವಿ; ಡಿಕೆಶಿ
ಮಂಡ್ಯ; ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೇಕದಾಟು ಯೋಜನೆ ಜಾರಿ ಮಾಡಿಯೇ ತೀರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದ ಜನಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ 400 ಟಿಎಂಸಿ ಕಾವೇರಿ ನೀರು ಸಮುದ್ರದ ಪಾಲಾಗುತ್ತಿದೆ. ಅದನ್ನು ತಡೆಹಿಡಿದು, ನಿಮಗೆ ನೀರಿನ ಕೊರತೆ ಬಾರದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಹೀಗಾಗಿ ನಾವು ಮೇಕೆದಾಟು ಯೋಜನೆ ಮಾಡಿಯೇ ತೀರುತ್ತೇವೆ ಎಂದು ಡಿಕೆಶಿ ಹೇಳಿದರು.
ನಾನು ನೀರಾವರಿ ಸಚಿವನಾಗಿದಾಗ ಈ ಯೋಜನೆ ಜಾರಿಗೆ ಪ್ರಯತ್ನ ಪಟ್ಟೆ. ಈ ಯೋಜನೆ ಮಂಡ್ಯ ಜನರ ಹಿತಕ್ಕಾಗಿ. ಈ ಮೇಕೆದಾಟು ಆಣೆಕಟ್ಟು ಕಟ್ಟಿದರೆ, ಅಲ್ಲಿ ನೀರು ಸಂಗ್ರಹಿಸಬಹುದು. ವಿದ್ಯುತ್ ಉತ್ಪಾದನೆ ಮಾಡಬಹುದು. ಬೆಂಗಳೂರಿಗೆ ಕುಡಿಯುವ ನೀರು ಕೊಡಬಹುದು. ಅಲ್ಲಿ ಮಂಡ್ಯದ ನಮ್ಮ ಜನ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಳೆ ಕಡಿಮೆ ಬಿದ್ದ ಸಮಯದಲ್ಲಿ ತಮಿಳುನಾಡು ಯಾವುದೇ ಕನಿಕರ ಇಲ್ಲದೇ ಕೆಆರ್ ಎಸ್ ನೀರನ್ನು ಕಿತ್ತುಕೊಳ್ಳುತ್ತಿದೆ. ಈ ಯೋಜನೆ ಜಾರಿ ಆದರೆ, ಮೇಕೆದಾಟು ಆಣೆಕಟ್ಟು ಮೂಲಕ ತಮಿಳುನಾಡಿಗೆ ನೀರು ಹರಿಸಿ ಕೆಆರ್ ಎಸ್ ನೀರನ್ನು ಈ ಭಾಗದ ರೈತರಿಗೆ ನೀಡಬಹುದು. ಅಲ್ಲದೆ ಈ ಯೋಜನೆ ಜತೆಗೆ ಈ ಜಿಲ್ಲೆಯಲ್ಲಿ ಬಾಕಿ ಇರುವ 40 ನೀರಾವರಿ ಯೋಜನೆ ಜಾರಿ ಮಾಡಲು ಈ ಡಿ.ಕೆ ಶಿವಕುಮಾರ್ ಬದ್ಧ. ಆಮೂಲಕ ಮಂಡ್ಯ ರೈತರ ಹಿತ ಹಾಗೂ ಸ್ವಾಭಿಮಾನ ರಕ್ಷಿಸುತ್ತೇವೆ. ಕೃಷ್ಣ ಅವರು ಮಂಡ್ಯ ಜನರಿಗಾಗಿ ಬೆಂಗಳೂರಿನಿಂದ ಮಂಡ್ಯವರೆಗೂ ಪಾದಯಾತ್ರೆ ಮಾಡಿದ್ದರು. ನಾವು ಮೇಕೆದಾಟು ಪಾದಯಾತ್ರೆ ಮಾಡಿದೆವು. ಈ ಹೋರಾಟಗಳು ನಿಮಗಾಗಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.