ಜ್ಯೋತಿಷಿಯ ಹನಿಟ್ರ್ಯಾಪ್; 49 ಲಕ್ಷ ಕಿತ್ತಿದ್ದ ಯುವತಿ ಅರೆಸ್ಟ್..!
ಮಂಗಳೂರು: ಜ್ಯೋತಿಷಿಯೊಬ್ಬರನ್ನು ಮೋಹದ ಬಲೆಗೆ ಬೀಳಿಸಿ, ನಂತರ ಆತನಿಂದ ಬ್ಲ್ಯಾಕ್ ಮಾಡುತ್ತಿದ್ದ ಯುವತಿ ಸೇರಿ ಇಬ್ಬರನ್ನು ಮಂಗಳೂರು ಪೊಲೀಸರು ಬಲೆಗೆ ಕೆಡವಿದ್ದಾರೆ. ಜ್ಯೋತಿಷಿಯಿಂದ 49 ಲಕ್ಷ ರೂಪಾಯಿ ಕಿತ್ತಿದ್ದ ಯುವತಿ ಈಗ ಕಂಬಿ ಎಣಿಸುತ್ತಿದ್ದಾಳೆ.
ಮಂಗಳೂರಿನಲ್ಲಿ ವಾಸವಿರುವ ಕೊಡಗು ಮೂಲದ ಭವ್ಯಾ ಹಾಗೂ ಹಾಸನ ಮೂಲದ ಕುಮಾರ್ ಬಂಧಿತರು. ಚಿಕ್ಕಮಗಳೂರು ಮೂಲದ ಜ್ಯೋತಿಷಿ ಈ ಹನಿಟ್ರ್ಯಾಪ್ ಬಲೆಗೆ ಬಿದ್ದವರು. ಭವ್ಯಾ ಹಾಗೂ ಕುಮಾರ್, ದಂಪತಿ ನಡುವೆ ಸಮಸ್ಯೆಗೆ ಪರಿಹಾರ ಮಾಡಿಕೊಡಿ ಎಂದು ಚಿಕ್ಕಮಗಳೂರಿನಿಂದ ಜ್ಯೋತಿಷಿಯನ್ನು ಕರೆಸಿದ್ದಾರೆ. ಈ ವೇಳೆ ಜ್ಯೋತಿಷಿಯೊಂದಿಗೆ ಸಲುಗೆಯಿಂದ ಇದ್ದು, ಆ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಅನಂತರ ಆ ದೃಶ್ಯ ತೋರಿಸಿ, ಬೆದರಿಸಿ ಹಂತ ಹಂತವಾಗಿ 49 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ.
ಸಾಲ ಮಾಡಿ ಹಣ ನೀಡದರೂ ಬಿಡದೆ ಜ್ಯೋತಿಷಿಗೆ ಮತ್ತೆ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಇಡುತ್ತಿದ್ದಂತೆ. ಮಾಧ್ಯಮ, ಪೊಲೀಸ್, ಮಹಿಳಾ ಸಂಘಟನೆ ಹೀಗೆ ಹಲವಾರು ಹೆಸರುಗಳಲ್ಲಿ ಜ್ಯೋತಿಷಿಗೆ ಕರೆ ಮಾಡಿ ಮತ್ತಷ್ಟು ಹಣ ಕೀಳಲು ಪ್ರಯತ್ನಿಸಿದ್ದಾರೆ. ಕೊನೆಗೆ ದಿಕ್ಕುತೋಚದ ಜ್ಯೋತಿಷಿ, ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಲಾಗಿದೆ.