ವಿದ್ಯಾರ್ಥಿನಿಯರ ಹೆಸ್ರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ; ಇಬ್ಬರು ಆರೋಪಿಗಳ ಅರೆಸ್ಟ್
ಹುಬ್ಬಳ್ಳಿ; ಹುಬ್ಬಳ್ಳಿಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಬೆದರಿಕೆ ಹಾಕುತ್ತಿದ್ದ, ಅದರಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸತತ ಏಳು ದಿನಗಳ ತನಿಖೆಯ ನಂತರ ಮೂಲ ಆರೋಪಿಗಳು ಪತ್ತೆಯಾಗಿದ್ದು, ಈ ಹಿಂದೆ ಅನುಮಾನ ಪಟ್ಟು ಬಂಧಿಸಲಾಗಿದ್ದು ಆರೋಪಿ ನಿರಪರಾಧಿ ಎಂಬುದು ಗೊತ್ತಾಗಿದೆ.
ನಕಲಿ ಇನ್ಸ್ಟಾಗ್ರಾಂ ಖಾತೆ ಮೂಲಕ ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಲಾಗುತ್ತಿತ್ತು. ಜೊತೆಗೆ ಪೊಲೀಸರಿಗೂ ಬೆದರಿಕೆ ಹಾಕಿ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಇದನ್ನು ಸೈಬರ್ ಕ್ರೈಂ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದರು. ಮೊದಲಿಗೆ ಸಂಶಯದ ಮೇಲೆ ಅದೇ ಕಾಲೇಜಿನ ಹಳೇ ವಿದ್ಯಾರ್ಥಿ ರಜನಿಕಾಂತ್ ತಳವಾರ ಎಂಬಾತನನ್ನು ಬಂಧಿಸಲಾಗಿತ್ತು. ಆದ್ರೆ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ ನಂತರ ರಜನಿಕಾಂತ್‌ಗೂ ಪ್ರಕರಣಕ್ಕೂ ಸಂಬಂಧವಿಲ್ಲ ಅನ್ನೋದು ಖಾತ್ರಿಯಾಗಿದೆ.
ಹೀಗಾಗಿ ತನಿಖೆ ಮುಂದುವರೆಸಿದ ಪೊಲೀಸರು, ವಿದ್ಯಾರ್ಥಿನಿ ಓದುತ್ತಿರುವ ಕಾಲೇಜಿನ ವಿದ್ಯಾರ್ಥಿಗಳೇ ಈ ಕೆಲಸ ಮಾಡಿರುವುದು ಗೊತ್ತಾಗಿದೆ. ವಿದ್ಯಾರ್ಥಿಯೊಬ್ಬನ ಜೊತೆ ಒಬ್ಬ ವಿದ್ಯಾರ್ಥಿನಿ ಸಲುಗೆಯಿಂದ ಇದ್ದಳು. ಅದನ್ನು ಸಹಿಸದ ಆರೋಪಿ, ಮತ್ತೊಂದು ಕಾಲೇಜಿನ ಸ್ನೇಹಿತನ ಸಹಾಯ ಪಡೆದು ಯುವತಿಯ ಇನ್ಸ್ಟಾ ಖಾತೆ ಹ್ಯಾಕ್ ಮಾಡಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಈಗ ಇಬ್ಬರನ್ನೂ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.