Districts

ಪಾದಯಾತ್ರೆ ವೇಳೆ ಅನುಚಿತ ವರ್ತನೆ; ಬಿ.ಆರ್‌.ಪಾಟೀಲ್‌ ಕ್ಷಮೆ ಕೋರಿದ ಡಿ.ಕೆ.ಶಿವಕುಮಾರ್‌

ಕಲಬುರಗಿ: ಮೇಕೆದಾಟು ಪಾದಯಾತ್ರೆ ವೇಳೆ ಕಾಂಗ್ರೆಸ್‌ ನಾಯಕರಲ್ಲೊಬ್ಬರಾದ ಬಿ.ಆರ್‌. ಪಾಟೀಲ ಅವರೊಂದಿಗೆ ಡಿ.ಕೆ.ಶಿವಕುಮಾರ್‌ ಅವರು ಅನುಚಿತ ವರ್ತನೆ ತೋರಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ ಎಂದು ತಿಳಿದುಬಂದಿದೆ. 

ಈ  ಬಗ್ಗೆ ಲಿಂಗಾಯತ ಸಮುದಾಯದ ಮುಖಂಡರು ಪ್ರತಿಭಟನೆಯ ಹಾದಿ ಹಿಡಿಯುವುದಾಗಿ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಬಿ.ಆರ್‌. ಪಾಟೀಲ್‌ ಅವರಿಗೆ ಪತ್ರ ಬರೆದು ಕ್ಷಮೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.  ಗುರುವಾರ ಪತ್ರ ಬರೆದಿರುವ ಶಿವಕುಮಾರ್, ‘ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ನಾನು ತಮ್ಮನ್ನು ತಳ್ಳಿ ಅವಮಾನ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು ಕಂಡು ನನಗೆ ಖೇದವಾಗಿದೆ. ತಮ್ಮಂತಹ ಹಿರಿಯರ ಜೊತೆ ಅನುಚಿತವಾಗಿ ನಡೆದುಕೊಳ್ಳುವುದನ್ನು ಕನಸು ಮನಸ್ಸಿನಲ್ಲಿ ಎಣಿಸಲು ಸಾಧ್ಯವಿಲ್ಲ. ಜನರ ನೂಕು ನುಗ್ಗಲಿನ ಸಮಯದಲ್ಲಿ ಏನಾದರೂ ಅಂತಹ ಅಚಾತುರ್ಯ ನಡೆದಿದ್ದರೆ ಅದಕ್ಕಾಗಿ ವಿಷಾದಿಸುತ್ತೇನೆ’ ಎಂದಿದ್ದಾರೆ.

ಈ ಬಗ್ಗೆ ಮಾಹಿತಿ ಇದ್ದ ಸಿದ್ದರಾಮಯ್ಯ ಹಾಗೂ ಈಶ್ವರ್‌ ಕಂಡ್ರೆ ಅವರು ಈ ಘಟನೆಯಿಂದ ಪಕ್ಷಕ್ಕೆ ಆಗುವ ಹಾನಿಯ ಬಗ್ಗೆ ಡಿ.ಕೆ.ಶಿವಕುಮಾರ್‌ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ. ಜೊತೆಗೆ ಈ ವಿಚಾರ ರಾಹುಲ್‌ ಗಾಂಧಿಯವರ ಗಮನಕ್ಕೂ ಬಂದಿತ್ತು. ಹೀಗಾಗಿ ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಬಿ.ಆರ್‌.ಪಾಟಿಲ್‌ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

 

Share Post