ಪತ್ನಿಗೆ ಪದೇ ಪದೇ ಮೆಸೇಜ್; ಟೈಲರ್‌ನನ್ನು ಮರ್ಡರ್ ಮಾಡಿದ ಗಂಡ
ಹಾಸನ; ಟೈಲರ್ ಒಬ್ಬ ತನ್ನ ಪತ್ನಿಗೆ ಪದೇಪದೇ ಮೆಸೇಜ್ ಕಳುಹಿಸುತ್ತಿದ್ದರಿಂದ ಆಕ್ರೋಶಗೊಂಡ ಮಹಿಳೆಯ ಪತಿ ತನ್ನ ಸಹಚರರೊಂದಿಗೆ ಸೇರಿ ಟೈಲರ್‌ನನ್ನು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹೊರವಲಯದಲ್ಲಿ ನಡೆದಿದೆ. ಬಟ್ಟೆ ಹೊಲೆಯುವ ಕೆಲಸ ಮಾಡುತ್ತಿದ್ದ ಗಂಗಾಧರ ಗೋವಿಂದೇಗೌಡ ಎಂಬಾತನೇ ಕೊಲೆಯಾದ ವ್ಯಕ್ತಿ. ನಿನ್ನೆ ಸಂಜೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
ಭರತ್, ಸೋಮು, ಅಭಿ ಹಾಗೂ ಇನ್ನೊಬ್ಬ ವ್ಯಕ್ತಿ ಕೊಲೆ ಮಾಡಿರುವ ಆರೋಪಿಗಳು. ಪ್ರಮುಖ ಆರೋಪಿ ಭರತ್ ಪತ್ನಿಗೆ ಕೊಲೆಯಾದ ಗಂಗಾಧರ್ ಮೆಸೇಜ್ ಕಳುಹಿಸುತ್ತಿದ್ದನಂತೆ. ಹೀಗಾಗಿ ಆಕ್ರೋಶಗೊಂಡಿದ್ದ ಭರತ್ ಕಾರಿನಲ್ಲಿ ಗಂಗಾಧರನನ್ನು ಕರೆದುಕೊಂಡು ಹೋಗಿ, ಶ್ರವಣ ಬೆಳಗೊಳದ ರಸ್ತೆಯಲ್ಲಿ ಕಟ್ಟಿಗೆಗಳಿಂದ ಹೊಡೆದು ಸಾಯಿಸಲಾಗಿದೆ.
ಗಂಗಾಧರನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದು ನೋಡಿ, ಗಂಗಾಧರ್ ಸಂಬಂದ ಕಾಂತರಾಜ್ ಕೂಡಾ ಹಿಂಬಾಲಿಸಿದ್ದಾರೆ. ಈ ವೇಳೆ ರಸ್ತೆಯ ಪಕ್ಕದಲ್ಲೇ ಗಂಗಾಧರ್ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಕಾಂತರಾಜ್‌ನನ್ನು ನೋಡಿದಾಕ್ಷಣ ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಗಂಗಾಧರ್‌ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಗಂಗಾಧರ್ ಪ್ರಾಣ ಪಕ್ಷಿ ಹಾರಿಹೋಗಿದೆ. ಈ ಬಗ್ಗೆ ಗಂಗಾಧರ ಪತ್ನಿ ಸೌಮ್ಯಾ ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.