ವರುಣಾ, ಚಾಮರಾಜನಗರದಲ್ಲಿ ಸ್ಪರ್ಧೆ ವಿಧಿನಿಯಮ; ವಿ.ಸೋಮಣ್ಣ
ಮೈಸೂರು; ನಾನು ನನ್ನ ಮಗನಿಗೆ ಒಂದು ಟಿಕೆಟ್ ಕೊಡಿ ಸಾಕು ಎಂದಿದ್ದೆ. ಆದ್ರೆ, ಹೈಕಮಾಂಡ್ ನಿಮಗೆ ತಾಕತ್ತಿದೆ. ನೀವೇ ಎರಡು ಕಡೆ ಸ್ಪರ್ಧೆ ಮಾಡಿ ಎಂದು ಚಾಮರಾಜನಗರ ಹಾಗೂ ವರುಣಾ ಕ್ಷೇತ್ರಗಳಿಗೆ ಟಿಕೆಟ್ ಕೊಟ್ಟರು ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎರಡು ಕ್ಷೇತ್ರಗಳಲ್ಲಿ ನಾನು ಸ್ಪರ್ಧೆ ಮಾಡಿರುವುದು ವಿಧಿನಿಯಮ ಎಂದು ಹೇಳಿದರು.
ಎರಡು ಕ್ಷೇತ್ರದಲ್ಲಿ ಗೆಲ್ಲೋದಕ್ಕೆ ನಿಮ್ಮ ಕೈಯಲ್ಲಿ ಸಾಧ್ಯವಿದೆ. ಸಿದ್ದರಾಮಯ್ಯ ವಿರುದ್ಧ ನೀವು ಗೆಲ್ಲುತ್ತೀರಿ ಎಂದು ಹೈಕಮಾಂಡ್ ಹೇಳಿ ಇಲ್ಲಿ ಕಳುಹಿಸಿದೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರ ನಡೆಸಿದ್ದರೂ, ವರುಣಾ ಕ್ಷೇತ್ರದಲ್ಲಿ ಆಗಬೇಕಿದ್ದ ಅಭಿವೃದ್ಧಿ ಆಗಿಲ್ಲ. ನಾನು ಅಧಿಕಾರ ನಡೆಸಿದ ಗೋವಿಂದ ರಾಜನಗರ ಕ್ಷೇತ್ರದ ಅಭಿವೃದ್ಧಿ ಒಮ್ಮೆ ನೋಡಿಬರಲಿ ಎಂದು ಸೋಮಣ್ಣ ಹೇಳಿದರು.
ಸಿದ್ದರಾಮಯ್ಯ ಅವರು ಕೇವಲ ಒಂದು ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹೀಗಾಗಿಯೇ ಅವರು ಸ್ಟಾರ್ಗಳನ್ನು ಕರೆತಂದು ಪ್ರಚಾರ ಮಾಡಿಸುತ್ತಿದ್ದಾರೆ. ಹೊರಗಿನಿಂದ ಜನ ಬಂದು ಹಣ ಹಂಚುತ್ತಿದ್ದಾರೆ. ಯಾರ್ಯಾರು ಹೊರಗಿನಿಂದ ಬಂದಿದ್ದಾರೆ ಅನ್ನೋದು ನನಗೆ ಗೊತ್ತಿದೆ ಎಂದು ಸೋಮಣ್ಣ ಹೇಳಿದ್ದಾರೆ.