ವಿಧಾನಸಭಾ ಟಿಕೆಟ್ ಕೊಡಿಸುತ್ತೇನೆ ಎಂದು ವಂಚನೆ; ಚೈತ್ರಾ ಕುಂದಾಪುರ ಅರೆಸ್ಟ್
ಉಡುಪಿ; ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನವಾಗಿದೆ. ಸಿಸಿಬಿ ಪೊಲೀಸರು ಉಡುಪಿಯಲ್ಲಿ ಕಾರ್ಯಾಚರಣೆ ನಡೆಸಿ ಚೈತ್ರಾಳನ್ನು ಬಂಧಿಸಿದ್ದಾರೆ.
ರಾತ್ರಿ ಚೈತ್ರಾ ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿದ್ದುದರ ಬಗ್ಗೆ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ವೇಳೆ ಆಕೆ ಆತ್ಮಹತ್ಯೆಯ ನಾಟಕವಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ನಕಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರನ್ನು ಸೃಷ್ಟಿ ಮಾಡಿ, ದೆಹಲಿಯಿಂದ ಬಂದಿದ್ದಾರೆ. ಇವರು ಹೇಳಿದರೆ ನಿಮಗೆ ಟಿಕೆಟ್ ಕನ್ಫರ್ಮ್ ಎಂದು ಗೋವಿಂದ ಬಾಬು ಪೂಜಾರಿಗೆ ನಂಬಿಸಿದ್ದರು. ಈಕೆಯ ಮಾತು ನಂಬಿ ಗೋವಿಂದ ಬಾಬು ಪೂಜಾರಿಯವರು ಚೈತ್ರಾಗೆ ಐದು ಕೋಟಿ ರೂಪಾಯಿ ನೀಡಿದ್ದರು. ಆದ್ರೆ, ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ವಾಪಸ್ ಕೇಳಿದ್ದಕ್ಕೆ ಚೈತ್ರಾ ಬೇರೆಯದೇ ಕಥೆ ಹೇಳಲು ಶುರು ಮಾಡಿದ್ದರು. ಹೀಗಾಗಿ ಗೋವಿಂದ ಬಾಬು ಪೂಜಾರಿಯವರು ವಂಚನೆ ಕೇಸ್ ದಾಖಲು ಮಾಡಿದ್ದರು.
ಚೈತ್ರಾ ಜೊತೆಗೆ ಆಕೆಗೆ ಸಹಕಾರ ನೀಡಿದ ಆಕೆಯ ಗೆಳೆಯ ಶ್ರೀಕಾಂತ್ ನಾಯಕ್‌ನನ್ನೂ ಬಂಧಿಸಲಾಗಿದೆ. ಚೈತ್ರಾ ಜೊತೆಗೆ ಶ್ರೀಕಾಂತ್ ನಾಯಕ್ ಪೆಲತ್ತೂರು, ಗಗನ್ ಕಡೂರು, ಪ್ರಸಾದ್ ಎಂಬವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಎಂಟು ಮಂದಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹೇರ್‌ಸ್ಟೈಲ್ ಅಂಗಡಿ ನಡೆಸುವ, ಕಬಾಬ್ ಮಾರುವವರನ್ನೇ ಬಿಜೆಪಿಯ ಹಿರಿಯ ನಾಯಕರು, ಆರ್‌ಎಸ್‌ಎಸ್ ಸಂಚಾಲಕರು ಎಂದು ಗೋವಿಂದ ಬಾಬುಗೆ ಪರಿಚಯ ಮಾಡಿಸಿ ಈ ವಂಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.